ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ನಾಯಕ ಫಾರೂಕ್ ಅಬ್ದುಲ್ಲಾ ಭಾಗಿಯಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ಇಂದು ಕಾಂಗ್ರೆಸ್ ಪಾದಯಾತ್ರೆಯನ್ನು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಅಬ್ದುಲ್ಲಾ ಕೂಡಿಕೊಂಡಿದ್ದಾರೆ.
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಯಾತ್ರೆ ನಡೆಯುತ್ತಿದೆ. ಡಿ.24ರಂದು ರಾಷ್ಟ್ರ ರಾಜಧಾನಿ ದೆಹಲಿಯನ್ನು ಈ ಯಾತ್ರೆ ತಲುಪಿತ್ತು. ಅಂದಿನಿಂದ 9 ದಿನಗಳ ಕಾಲ ಯಾತ್ರೆಗೆ ವಿರಾಮ ಇತ್ತು. ಇಂದಿನಿಂದ ಮತ್ತೆ ಭಾರತ್ ಜೋಡೋ ಯಾತ್ರೆ ಆರಂಭವಾಗಿದ್ದು, ದೆಹಲಿ ಮೂಲಕ ಉತ್ತರ ಪ್ರದೇಶವನ್ನು ಪ್ರವೇಶಿಸಿದೆ. ಇಲ್ಲಿ ಫಾರೂಕ್ ಅಬ್ದುಲ್ಲಾ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಭಾರತ್ ಜೋಡೋ ಯಾತ್ರೆಗೆ ಬಂದ ಅಬ್ದುಲ್ಲಾ ಅವರನ್ನು ರಾಹುಲ್ ಗಾಂಧಿ ತಬ್ಬಿಕೊಳ್ಳುವ ಮೂಲಕ ಸ್ವಾಗತಿಸಿದ್ದಾರೆ. ಈ ವೇಳೆ ಪ್ರಿಯಾಂಕಾ ಗಾಂಧಿ ವಾದ್ರಾ ಸಹ ಇದ್ದರು.
ಇದನ್ನೂ ಓದಿ:ಬಿಜೆಪಿಯನ್ನು ನನ್ನ ಗುರು ಎಂದು ಪರಿಗಣಿಸಿರುವೆ: ರಾಹುಲ್ ಗಾಂಧಿ
ಕಾಂಗ್ರೆಸ್‌ಗೆ ಮತ್ತೊಂದು ಶುಭ ಸುದ್ದಿ:ಉತ್ತರ ಪ್ರದೇಶದಿಂದಲೇ ಕಾಂಗ್ರೆಸ್‌ಗೆ ಶುಭ ಸುದ್ದಿ ಬಂದಿದೆ. ಈ ಹಿಂದೆ ಭಾರತ್ ಜೋಡೋ ಯಾತ್ರೆಯಿಂದ ದೂರ ಉಳಿದಿದ್ದ ಉತ್ತರ ಪ್ರದೇಶದ ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಈಗ ಬಾಗ್‌ಪತ್ ಮತ್ತು ಶಾಮ್ಲಿಯಲ್ಲಿ ಯಾತ್ರೆಯನ್ನು ಸ್ವಾಗತಿಸುವುದಾಗಿ ಹೇಳಿದೆ. ಈ ಬಗ್ಗೆ ಪಕ್ಷದ ವಕ್ತಾರ ಅನಿಲ್ ದುಬೆ ಮಾಹಿತಿ ನೀಡಿದ್ದಾರೆ.
ಅಲ್ಲದೇ, ಆರ್‌ಎಲ್‌ಡಿ ಅಧ್ಯಕ್ಷ ಜಯಂತ್ ಚೌಧರಿ, ಭಾರತ್ ಜೋಡೋ ಯಾತ್ರೆ ಯಾತ್ರಿಗಳಿಗೆ ನಮಸ್ಕಾರ. ಈ ಅಭಿಯಾನವು ತನ್ನ ಗುರಿಗಳನ್ನು ಅರಿತುಕೊಳ್ಳುತ್ತದೆ ಮತ್ತು ಜನರನ್ನು ಒಟ್ಟಿಗೆ ಸೇರಿಸುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ಟ್ವೀಟ್ ಮಾಡಿ ಹೇಳಿದ್ದರು.
ಇದನ್ನೂ ಓದಿ:ಭಾರತ್ ಜೋಡೋ ಬಳಿಕ ಹಾಥ್ ಸೇ ಹಾಥ್ ಜೋಡೋ ಅಭಿಯಾನ: ಪ್ರಿಯಾಂಕಾ ಗಾಂಧಿ ನೇತೃತ್ವ