ಶ್ರೀನಗರ (ಜಮ್ಮು- ಕಾಶ್ಮೀರ):ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲೇಬೇಕು ಪಣ ತೊಟ್ಟಿರುವ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಮತ್ತೊಂದು ಹಿನ್ನಡೆ ಉಂಟಾಗಿದೆ.
ಕೆಲ ದಿನಗಳ ಹಿಂದಷ್ಟೇ ಪ್ರತಿಪಕ್ಷಗಳ ಪರವಾಗಿ ರಾಷ್ಟ್ರಪತಿ ಅಭ್ಯರ್ಥಿ ಎಂದೇ ಬಿಂಬಿತವಾಗಿದ್ದ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ತಾವು ಚುನಾವಣೆಗೆ ನಿಲ್ಲಲ್ಲ ಎಂದು ಘೋಷಿಸಿದ ಬಳಿಕ ಇದೀಗ, ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ನ್ಯಾಷನಲ್ ಕಾನ್ಫ್ರೆನ್ಸ್ ಮುಖ್ಯಸ್ಥ ಫಾರೂಖ್ ಅಬ್ದುಲ್ಲಾ ಕೂಡ ರಾಷ್ಟ್ರಪತಿ ಅಭ್ಯರ್ಥಿ ರೇಸ್ನಿಂದ ಹಿಂದೆ ಸರಿದಿದ್ದಾರೆ.
ರಾಷ್ಟ್ರಪತಿ ಹುದ್ದೆಗೆ ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ಫಾರೂಖ್ ಅಬ್ದುಲ್ಲಾರ ಹೆಸರನ್ನು ಮಮತಾ ಬ್ಯಾನರ್ಜಿ ಪ್ರಸ್ತಾಪಿಸಿದ್ದರು. ಆದರೆ, ಇಂದು ನ್ಯಾಷನಲ್ ಕಾನ್ಫ್ರೆನ್ಸ್ ಮುಖ್ಯಸ್ಥರು 'ಪರಿಗಣಿತ ಅಭ್ಯರ್ಥಿ ಸ್ಥಾನ'ದಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ.
ಪರಿಗಣನೆ ಗೌರವಿಸುವೆ, ಸ್ಪರ್ಧಿಸಲ್ಲ:'ಮಮತಾ ಬ್ಯಾನರ್ಜಿ ಅವರು ಪ್ರತಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ತಮ್ಮ ಹೆಸರನ್ನು ಮುನ್ನೆಲೆಗೆ ತಂದಿದ್ದರು. ಈ ಅನಿರೀಕ್ಷಿತ ಬೆಳವಣಿಗೆಯ ಬಗ್ಗೆ ನನಗೆ ಹಲವರು ಕರೆ ಮಾಡಿ ಮಾಹಿತಿ ನೀಡಿದ್ದರು. ಈ ಬಗ್ಗೆ ಕುಟುಂಬಸ್ಥರು, ಸಹವರ್ತಿಗಳ ಜೊತೆ ಚರ್ಚಿಸಿದ ಬಳಿಕ ತಾವು ಚುನಾವಣಾ ರೇಸ್ನಿಂದ ಹಿಂದೆ ಸರಿಯುವುದಾಗಿ ಘೋಷಿಸಿದರು.
ಕಾಶ್ಮೀರಕ್ಕೆ ನನ್ನ ಸೇವೆ ಬೇಕಿದೆ:ಮಮತಾ ಅವರು ದೇಶದ ಅತ್ಯುನ್ನತ ಹುದ್ದೆಗೆ ತಮ್ಮ ಹೆಸರನ್ನು ಪರಿಗಣಿಸಿದ್ದನ್ನು ಗೌರವಿಸುತ್ತೇನೆ. ಆದರೆ, ಜಮ್ಮು- ಕಾಶ್ಮೀರ ರಾಜಕೀಯ ಈಗ ನಿರ್ಣಾಯಕ ಘಟ್ಟದಲ್ಲಿದೆ. ಈ ಅನಿಶ್ಚಿತ ಸಂದರ್ಭದಲ್ಲಿ ತಮ್ಮ ಸೇವೆ ಜಮ್ಮು- ಕಾಶ್ಮೀರಕ್ಕೆ ಬೇಕಾಗಿದೆ. ಹಾಗಾಗಿ ತಾವು ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯಲು ಬಯಸುತ್ತಿರುವ ಕಾರಣ ರಾಷ್ಟ್ರಪತಿ ಹುದ್ದೆ ಚುನಾವಣೆಯಿಂದ ಹಿಂದೆ ಸರಿಯುವುದಾಗಿ ಫಾರೂಖ್ ಅಬ್ದುಲ್ಲಾ ತಿಳಿಸಿದರು.
ಕೃತಜ್ಞತೆ ಸಲ್ಲಿಕೆ:ಮಮತಾ ಅವರಿಗೆ ಧನ್ಯವಾದ ಅರ್ಪಿಸಿದ ಫಾರೂಕ್ ಅಬ್ದುಲ್ಲಾ, 'ನನ್ನ ಹೆಸರನ್ನು ಪ್ರಸ್ತಾಪಿಸಿದ್ದಕ್ಕಾಗಿ ಮಮತಾ ದೀದಿ ಅವರಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ನನಗೆ ಬೆಂಬಲ ನೀಡಿದ ಎಲ್ಲಾ ಹಿರಿಯ ನಾಯಕರಿಗೂ ಆಭಾರಿಯಾಗಿದ್ದೇನೆ. ಗೌರವಯುತವಾಗಿ ನನ್ನ ಹೆಸರನ್ನು ಪರಿಗಣನೆಯಿಂದ ಹಿಂತೆಗೆದುಕೊಳ್ಳಲು ಬಯಸುತ್ತೇನೆ. ಮುಂದಿನ ಅಭ್ಯರ್ಥಿಯನ್ನು ಬೆಂಬಲಿಸಲು ನಾನು ಎದುರು ನೋಡುತ್ತಿದ್ದೇನೆ ಅವರು ಹೇಳಿದರು.
ಬುಧವಾರದಂದು ಮಮತಾ ಬ್ಯಾನರ್ಜಿ ಅವರು ಮಹಾತ್ಮ ಗಾಂಧಿಯವರ ಮೊಮ್ಮಗ ಗೋಪಾಲಕೃಷ್ಣ ಗಾಂಧಿ ಮತ್ತು ಜಮ್ಮು ಕಾಶ್ಮೀರದ ನ್ಯಾಷನಲ್ ಕಾನ್ಫ್ರೆನ್ಸ್ ಮುಖ್ಯಸ್ಥ ಡಾ.ಫಾರೂಕ್ ಅಬ್ದುಲ್ಲಾ ಅವರ ಹೆಸರನ್ನು ಭಾರತದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ಪ್ರತಿಪಕ್ಷದ ಅಭ್ಯರ್ಥಿಗಳಾಗಿ ಪ್ರಸ್ತಾಪಿಸಿದ್ದರು.
ಓದಿ:ತಾಯಿಯ ಹುಟ್ಟುಹಬ್ಬಕ್ಕೆ ಪತ್ರ ಬರೆದ ಪ್ರಧಾನಿ ನರೇಂದ್ರ ಮೋದಿ