ನವದೆಹಲಿ/ಗಾಝಿಯಾಬಾದ್:ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯಬೇಕೆಂದು ಪಟ್ಟು ಹಿಡಿದು ಕೂತಿರುವ ರೈತರ ಐತಿಹಾಸ ಪ್ರತಿಭಟನೆ ಆರು ತಿಂಗಳು ಪೂರೈಸಿದ್ದು, ಇಂದು ದೆಹಲಿಯ ಗಡಿ ಸೇರಿದಂತೆ ದೇಶದಾದ್ಯಂತ ರೈತರು ಬ್ಲ್ಯಾಕ್ ಡೇ ಆಚರಿಸಲು ನಿರ್ಧರಿಸಿದ್ದಾರೆ.
2020 ರ ನವೆಂಬರ್ ಕೊನೆ ವಾರದಲ್ಲಿ ಪ್ರಾರಂಭವಾದ ರೈತರ ಮಹಾ ಹೋರಾಟ ಚಳಿ, ಶೀತಗಾಳಿ, ಮಳೆ ಎಲ್ಲವರನ್ನೂ ಎದುರಿಸಿ, ಈಗ ಬೇಸಿಗೆಯಲ್ಲೂ ಮುಂದುವರೆಯುತ್ತಿದೆ. ತಿದ್ದುಪಡಿ ಮಾಡಿರುವ ಮೂರು ಕೃಷಿ ಕಾನೂನುಗಳನ್ನು ಹಿಂದೆಗೆದುಕೊಳ್ಳಬೇಕು ಮತ್ತು ಎಂಎಸ್ಪಿ ಜಾರಿ ಮಾಡಬೇಕೆಂಬುವುದು ರೈತರ ಬೇಡಿಕೆ.
ದೆಹಲಿಯ ಗಡಿಗಳಾದ ಸಿಂಘು, ಗಾಝಿಪುರಗಳಲ್ಲಿ ಹೋರಾಟ ಪ್ರಾರಂಭಿಸಿದ ರೈತರು, ಕಳೆದ 6 ತಿಂಗಳಿನಿಂದ ಅಲ್ಲಿಯೇ ಉಳಿದುಕೊಂಡಿದ್ದಾರೆ. ಕೇಂದ್ರ ಸರ್ಕಾರ ರೈತರೊಂದಿಗೆ ಸುಮಾರು 7 ಸುತ್ತಿನ ಮಾತುಕತೆ ನಡೆಸಿದರೂ ಫಲಕೊಟ್ಟಿಲ್ಲ. ರೈತರು ಮಾತ್ರ ನೂತನ ಕೃಷಿ ಕಾನೂನುಗಳನ್ನು ವಾಪಾಸ್ ಪಡೆಯದೆ ಮನೆಗೆ ಹೋಗಲ್ಲ ಎಂದು ಪಟ್ಟು ಹಿಡಿದು ಕೂತಿದ್ದಾರೆ. ರೈತರ ಹೋರಾಟ ಎಷ್ಟಮಟ್ಟಿಗೆ ಇದೆ ಎಂದರೆ, ತಮ್ಮ ಟ್ರ್ಯಾಕ್ಟರ್ಗಳೊಂದಿಗೆ ರ್ಯಾಲಿಯಲ್ಲಿ ದೆಹಲಿ ತಲುಪಿದವರು, ಇಂದು ರಾಜಧಾನಿಯ ಗಡಿಗಳಲ್ಲಿ ಮನೆಗಳನ್ನೇ ಕಟ್ಟಿಕೊಂಡಿದ್ದಾರೆ.
ರೈತ ಮಹಾ ಪಂಚಾಯತ್:ರೈತ ಹೋರಾಟದ ಮುಂದುವರೆದ ಭಾಗವಾಗಿ ಸಂಯುಕ್ತ ಕಿಸಾನ್ ಮೋರ್ಚಾದ ಮುಖ್ಯಸ್ಥ ರಾಕೇಶ್ ಟಿಕಾಯತ್ ದೇಶದಾದ್ಯಂತ ರೈತ ಮಹಾಪಂಚಾಯತ್ ನಡೆಸಿ ರೈತರನ್ನು ಒಗ್ಗೂಡಿಸಿದ್ದಾರೆ. ಬಿಹಾರ, ಮಧ್ಯಪ್ರದೇಶ, ಗುಜರಾತ್, ಪಂಜಾಬ್, ಪಶ್ಚಿಮ ಬಂಗಾಳ ಕರ್ನಾಟಕದ ಶಿವಮೊಗ್ಗ, ದಾವಣಗೆರೆಯಲ್ಲೂ ರೈತ ಮಹಾಪಂಚಾಯತ್ಗಳು ನಡೆದಿದೆ. ಈ ಮೂಲಕ ಟಿಕಾಯತ್ ರೈತ ಸಮೂಹನ್ನು ಒಗ್ಗೂಡಿಸುವ ಕಾರ್ಯ ಮಾಡಿದ್ದಾರೆ. ಇದು ಅವರ ಹೋರಾಟಕ್ಕೆ ದೊಡ್ಡ ಮಟ್ಟದ ಬಲ ನೀಡಿದೆ.
ಇಂದು ಬ್ಲ್ಯಾಕ್ ಡೇ:ರೈತರ ಹೋರಾಟ 6 ತಿಂಗಳು ಪೂರೈಸಿದ ಹಿನ್ನೆಲೆ ಇಂದು ಅಖಿಲ ಭಾರತ ಸಂಯುಕ್ತ ಕಿಸಾನ್ ಮೋರ್ಚಾದಿಂದ ಬ್ಲ್ಯಾಕ್ ಡೇ ಆಚರಿಸಲು ಕರೆ ಕೊಡಲಾಗಿದೆ. ದೆಹಲಿ ಗಡಿಗಳಲ್ಲಿರುವ ರೈತರು ಅಲ್ಲೇ ಕಪ್ಪು ದಿನ ಆಚರಣೆ ಮಾಡಲಿದ್ದಾರೆ. ಕೋವಿಡ್ ಹಿನ್ನೆಲೆ ದೇಶದ ಜನರು ಅವರವರ ಮನೆ, ಟ್ರ್ಯಾಕ್ಟರ್ಗಳಿಗೆ ಕಪ್ಪು ಧ್ವಜ ಕಟ್ಟಿ ನಮ್ಮ ಹೋರಾಟಕ್ಕೆ ಬೆಂಬಲ ನೀಡಲಿದ್ದಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚಾದ ಮುಖ್ಯಸ್ಥ ರಾಕೇಶ್ ಟಿಕಾಯತ್ ಹೇಳಿದ್ದಾರೆ.
ಈ ಹಿಂದೆ ಚದುರಿ ಹೋಗಿದ್ದ ದೇಶದ ರೈತರು ಹೋರಾಟದ ಹೆಸರಿನಲ್ಲಿ ಒಂದಾಗಿದ್ದಾರೆ. ಈಗ ಇಡೀ ದೇಶದ ರೈತರಲ್ಲಿ ಐಕ್ಯತೆ ಮೂಡಿದೆ. ಇದು ನಮಗೆ ಬಲ ನೀಡಿದೆ. ಕೇಂದ್ರ ಸರ್ಕಾರ ಒಂದಲ್ಲೊಂದು ದಿನ ನಮ್ಮ ಮಾತು ಕೇಳಬೇಕಾಗುತ್ತದೆ ಎಂದು ಟಿಕಾಯತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದೇಶದಾದ್ಯಂತ ರೈತರು ತಮ್ಮ ಟ್ರ್ಯಾಕ್ಟರ್ಗಳಿಗೆ ಡೀಸೆಲ್ ಹಾಕಿ ರೆಡಿಯಾಗಿ ನಿಂತಿದ್ದಾರೆ. ನಾವು ಒಂದು ಕರೆ ಕೊಟ್ಟರೆ ಎಲ್ಲರೂ ದೆಹಲಿಯತ್ತ ಬರುತ್ತಾರೆ. ರೈತರು ಮಾತ್ರವಲ್ಲದೆ ನಮಗೆ ಯುವಕರು, ಕಾರ್ಮಿಕ ವರ್ಗವೂ ಬೆಂಬಲ ನೀಡಿದೆ ಎಂದು ಟಿಕಾಯತ್ ಹೇಳಿದ್ದಾರೆ.
ಶಾಂತಿಯುತ ಪ್ರತಿಭಟನೆಗೆ ಮನವಿ:ಕೋವಿಡ್ ಹಿನ್ನೆಲೆಯಲ್ಲಿ ಯಾವುದೇ ರೀತಿ ನಿಯಮ ಉಲ್ಲಂಘಿಸದೆ ಶಾಂತಿಯುತವಾಗಿ ಬ್ಲ್ಯಾಕ್ ಡೇ ಆಚರಿಸಲು ರೈತ ನಾಯಕರು ಮನವಿ ಮಾಡಿದ್ದಾರೆ. ಕೋವಿಡ್ ಕಾರಣ ದೆಹಲಿ ಗಡಿಯಲ್ಲಿ ರೈತರ ಸಂಖ್ಯೆ ಕಡಿಮೆಯಾಗಿದೆ. ಅಲ್ಲಿ ರೈತ ನಾಯಕರು ಮಾತ್ರ ಕಪ್ಪು ದಿನ ಆಚರಿಸಲಿದ್ದಾರೆ. ಇನ್ನುಳಿದಂತೆ ದೇಶದಾದ್ಯಂತ ರೈತರು ತಾವು ಇದ್ದಲ್ಲಿಯೇ ಹೋರಾಟಕ್ಕೆ ಬೆಂಬಲ ನೀಡಲಿದ್ದಾರೆ.
ಗಣ್ಯರ ಬೆಂಬಲ:ರೈತರ ಕಪ್ಪು ದಿನಕ್ಕೆ ಈಗಾಗಲೇ ಗಣ್ಯರು ಬೆಂಬಲ ವ್ಯಕ್ತಪಡಿಸಿದ್ದಾರೆ. ಪಂಜಾಬ್ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅಮೃತಸರ್ ಮತ್ತು ಪಟಿಯಾಲದಲ್ಲಿರುವ ತಮ್ಮ ನಿವಾಸದ ಮೇಲ್ಛಾವಣಿಯ ಮೇಲೆ ಮಂಗಳವಾರವೇ ಕಪ್ಪು ಬಾವುಟ ಹಾರಿಸಿದ್ದಾರೆ. ಅವರ ಪತ್ನಿ ಡಾ. ನವಜೋತ್ ಕೌರ್ ಸಿಧು ಸಹ ಇದಕ್ಕೆ ಸಾಥ್ ನೀಡಿದ್ದಾರೆ. ಇದರೊಂದಿಗೆ ಹಲವು ರಾಜಕೀಯ ನಾಯಕರು ಮತ್ತು ಪಕ್ಷಗಳು ಬೆಂಬಲ ವ್ಯಕ್ತಪಡಿಸಿದೆ.