ನವದೆಹಲಿ: ಯಾವುದೇ ಕಾನೂನು ಸಂಪೂರ್ಣವಾಗಿ ದೋಷಯುಕ್ತವಾಗಿರಲು ಸಾಧ್ಯವಿಲ್ಲ. ರೈತರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ನಿಬಂಧನೆಗಳ ಬಗ್ಗೆ ಚರ್ಚಿಸಲು ಸರ್ಕಾರ ಸಿದ್ಧವಾಗಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.
ಪ್ರತಿಭಟನಾ ನಿರತ ರೈತರು, ಎಂಎಸ್ಪಿ (ಕನಿಷ್ಠ ಬೆಂಬಲ ಬೆಲೆ) ಬಗ್ಗೆ ಲಿಖಿತ ಭರವಸೆ ನೀಡುವ ಮತ್ತು ಹೊಸ ಕೃಷಿ ಕಾನೂನುಗಳಲ್ಲಿ ಕೆಲವು ನಿಬಂಧನೆಗಳನ್ನು ತಿದ್ದುಪಡಿ ಮಾಡುವ ಸರ್ಕಾರದ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ. ಆದರೆ ಸರ್ಕಾರದ ಪ್ರಸ್ತಾಪಗಳನ್ನು ಪರಿಗಣಿಸುವಂತೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಒತ್ತಾಯಿಸಿದ್ದಾರೆ.
"ರೈತರಿಗೆ ಸಮಸ್ಯೆಗಳಿರುವ ಯಾವುದೇ ನಿಬಂಧನೆಗಳನ್ನು ಮುಕ್ತ ಮನಸ್ಸಿನಿಂದ ಪರಿಗಣಿಸಲು ಸರ್ಕಾರ ಸಿದ್ಧವಾಗಿದೆ ಮತ್ತು ಅವರ ಎಲ್ಲಾ ಆತಂಕಗಳನ್ನು ನಾವು ನಿವಾರಿಸಲು ಬಯಸುತ್ತೇವೆ" ಎಂದು ತೋಮರ್ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ.
ಎಂಎಸ್ಪಿ ಜೊತೆ ಈ ಕಾನೂನುಗಳೂಗ ಯಾವುದೇ ಸಂಬಂಧವಿಲ್ಲ. ಅವು ಎಂಎಸ್‌ಪಿಗೆ ಯಾವುದೇ ಪರಿಣಾಮ ಬೀರುವುದಿಲ್ಲ. ಎಂಎಸ್ಪಿ ಮುಂದುವರಿಯುತ್ತದೆ ಎಂದು ನಾನು ರೈತರಿಗೆ ವಿವರಿಸಿದ್ದೇನೆ ಮತ್ತು ಭರವಸೆ ನೀಡಿದ್ದೇನೆ ಎಂದಿದ್ದಾರೆ.
ಇದೇ ವೇಳೆ ಮಾತನಾಡಿದ ಕೇಂದ್ರ ಸಚಿವ ಪಿಯೂಷ್ ಗೋಯಲ್, ರೈತರು ತಮ್ಮ ಉತ್ಪನ್ನಗಳನ್ನು ಖಾಸಗಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಒತ್ತಾಯಿಸಲಾಗುತ್ತದೆ ಎಂಬ ಆತಂಕಗಳಿವೆ. ಇದು ಸಂಪೂರ್ಣವಾಗಿ ತಪ್ಪಾಗಿದ್ದು, ರೈತರ ಮೇಲೆ ಬಲವಂತವಾಗಿ ಹೇರುವಂತಹ ಯಾವುದೇ ಅಂಶಗಳು ಕಾನೂನಿನಲ್ಲಿಲ್ಲ ಎಂದು ಹೇಳಿದ್ದಾರೆ.