ನವದೆಹಲಿ:ಮೂರು ಕೃಷಿ ಕಾನೂನುಗಳ ರದ್ದತಿ ಮತ್ತು ಗೋಧಿ ಬೆಳೆಗೆ ನಿಗದಿತ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಣೆ ಮಾಡಬೇಕೆಂದು ಒತ್ತಾಯಿಸಿ ಉತ್ತರ ಪ್ರದೇಶದ ಪ್ರತಿ ಹಳ್ಳಿಯ ರೈತರು ಪ್ರತಿದಿನ ಎಂಟು ಗಂಟೆಗಳ ಕಾಲ ಉಪವಾಸ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂದೇಶಗಳನ್ನು ಕಳುಹಿಸುತ್ತಾರೆ ಎಂದು ರಾಷ್ಟ್ರೀಯ ಕಿಸಾನ್ ಮಜ್ದೂರ್ ಸಂಘಟನೆ (ಆರ್‌ಕೆಎಂಎಸ್) ಹೇಳಿದೆ.
ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ನಡೆದಿದ್ದ ಹಿಂಸಾಚಾರದ ನಂತರ ರೈತರ ಆಂದೋಲನದಿಂದ ಆರ್‌ಕೆಎಂಎಸ್ ತನ್ನ ಬೆಂಬಲವನ್ನು ಹಿಂತೆಗೆದುಕೊಂಡಿದೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಇತರ 21 ರೈತ ಸಂಘಟನೆಗಳು ಸೇರಿಕೊಂಡು ಉತ್ತರ ಪ್ರದೇಶ ಕಿಸಾನ್ ಮಜ್ದೂರ್ ಮೋರ್ಚಾ (ಯುಪಿಕೆಎಂಎಂ) ಅನ್ನು ರೂಪಿಸಲಾಗಿದೆ.
'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಆರ್‌ಕೆಎಂಎಸ್ ಅಧ್ಯಕ್ಷ ವಿ.ಎಂ.ಸಿಂಗ್ ಅವರು, ದೇಶದ ಶೇ.85 ರಷ್ಟು ಸಣ್ಣ ಮತ್ತು ಮಧ್ಯಮ ರೈತರು ದೆಹಲಿಗೆ ತಲುಪುವ ಸಾಮರ್ಥ್ಯ ಹೊಂದಿಲ್ಲ. ಈ ರೈತರಲ್ಲಿ ಹೆಚ್ಚಿನವರು ದೈನಂದಿನ ದುಡಿಮೆಯನ್ನು ಅವಲಂಬಿಸಿದ್ದಾರೆ. ಅಷ್ಟೇ ಅಲ್ಲದೆ, ಜಾನುವಾರುಗಳು ಸಹ ಇರುವುದರಿಂದ ಬರಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಪ್ರತಿ ಹಳ್ಳಿಯ ಐದು ರೈತರು ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ಉಪವಾಸ ಸತ್ಯಾಗ್ರಹ ಕೈಗೊಳ್ಳಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಈ ರೈತರು ಎರಡು ನಿಮಿಷಗಳ ಸಂದೇಶಗಳನ್ನು ರೆಕಾರ್ಡ್ ಮಾಡುತ್ತಾರೆ. ತಮ್ಮನ್ನು ಪ್ರಧಾನಿ ಮೋದಿಯವರಿಗೆ ಪರಿಚಯಿಸಿಕೊಳ್ಳುತ್ತಾರೆ ಮತ್ತು ಹೊಸ ಕಾನೂನುಗಳಿಂದ ತಮಗಾಗುವ ಕುಂದುಕೊರತೆಗಳನ್ನು ಹಂಚಿಕೊಳ್ಳುತ್ತಾರೆ. ಅದನ್ನು ನಮ್ಮ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗುವುದು" ಎಂದು ಸಿಂಗ್ ಹೇಳಿದರು.
"ಪ್ರತಿಯೊಂದು ಹಳ್ಳಿಯ ರೈತರು ಗೋಧಿ ಬೆಳೆಗೆ ನಿಗದಿತ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಪಡೆಯುವವರೆಗೆ ಇದು ಮುಂದುವರಿಯುತ್ತದೆ" ಎಂದು ಅವರು ತಿಳಿಸಿದರು.