ನವದೆಹಲಿ: ದೆಹಲಿ ಮತ್ತು ಇತರ ಪ್ರದೇಶಗಳಲ್ಲಿ ರೈತರ ಪ್ರತಿಭಟನೆ 116ನೇ ದಿನಕ್ಕೆ ಕಾಲಿಡುತ್ತಿದ್ದಂತೆ, ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಬೇಡಿಕೆಗೆ ವಿವಿಧ ಸಂಸ್ಥೆಗಳು ಧ್ವನಿಗೂಡಿಸುತ್ತಿದೆ. ಮೂರು ಕೃಷಿ ಕಾನೂನುಗಳ ವಿರುದ್ಧ ತಮ್ಮ ಆಂದೋಲನವನ್ನು ತೀವ್ರಗೊಳಿಸಿದ ರೈತ ಸಂಘಟನೆಗಳು ಮಾರ್ಚ್ 26 ರಂದು 'ಸಂಪೂರ್ಣ ಭಾರತ್ ಬಂದ್'ಕ್ಕೆ ಕರೆ ನೀಡಿವೆ.
ಸಿಂಧು ಗಡಿಯಲ್ಲಿನ ರೈತ ಮುಖಂಡರು ಇಡೀ ದಿನ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಬಂದ್ ಮಾಡಲಾಗುವುದು ಎಂದು ಹೇಳಿದರು. ಮಾರ್ಚ್ 28 ರಂದು ನಡೆಯುವ ‘ಹೋಲಿಕಾ ದಹನ್’ ಸಂದರ್ಭದಲ್ಲಿ ಹೊಸ ಕೃಷಿ ಕಾನೂನುಗಳ ಪ್ರತಿಗಳನ್ನು ಸುಡಲಾಗುವುದು ಎಂದು ರೈತ ಮುಖಂಡರು ಹೇಳಿದ್ದಾರೆ.
ಭಗತ್ ಸಿಂಗ್, ರಾಜ್‌ಗುರು, ಸುಖದೇವ್ ಅವರ 90ನೇ ಹುತಾತ್ಮ ದಿನವನ್ನು ಮಾರ್ಚ್ 23 ರಂದು ದೆಹಲಿ ಗಡಿಯಲ್ಲಿ ಮಾತ್ರವಲ್ಲದೇ ಪಂಜಾಬ್, ಹರಿಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶದ ವಿವಿಧ ಸ್ಥಳಗಳಲ್ಲಿಯೂ ದೊಡ್ಡ ಪ್ರಮಾಣದಲ್ಲಿ ಆಚರಿಸಲಾಗುವುದು ಎಂದು ರೈತ ಮುಖಂಡರು ಹೇಳಿದ್ದಾರೆ.