ಶ್ರೀನಗರ: ಜಮ್ಮು-ಕಾಶ್ಮೀರದ ರೈತರೊಬ್ಬರ ಮಗ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸುವ ಭಾರತೀಯ ಆರ್ಥಿಕ ಸೇವೆಗಳ (ಐಇಎಸ್) ಪರೀಕ್ಷೆಯಲ್ಲಿ ಎರಡನೇ ರ್ಯಾಂಕ್ ಪಡೆಯುವ ಮೂಲಕ ಸಾಧನೆಗೈದಿದ್ದಾರೆ. ಈ ಮೂಲಕ ಕೇಂದ್ರಾಡಳಿತ ಪ್ರದೇಶದ ಯುವಜನತೆಗೆ ಯುವಕ ತನ್ವೀರ್ ಅಹ್ಮದ್ ಖಾನ್ ಸ್ಫೂರ್ತಿಯಾಗಿದ್ದಾರೆ.
ತನ್ವೀರ್ ಅಹ್ಮದ್ ಖಾನ್ ಎರಡನೇ ರ್‍ಯಾಂಕ್ ಗಳಿಸಿ ಸಾಧನೆ ಮಾಡಿರುವ ರೈತ ಪುತ್ರ. ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ಶಿಕ್ಷಣ ಪೂರೈಸಿರುವ ತ್ವನೀರ್, ಐಇಎಸ್ 2020ರ ಪರೀಕ್ಷೆಯಲ್ಲಿ ತೋರಿರುವ ಸಾಧನೆಗೆ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಟ್ವೀಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಕಠಿಣ ಶ್ರಮ ಮತ್ತು ಗುರಿಯತ್ತ ಗಮನವಿದ್ದರೆ ಯಾವುದೂ ಅಸಾಧ್ಯವಾಗುವುದಿಲ್ಲ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ದಕ್ಷಿಣ ಕಾಶ್ಮೀರದ ನಿಗೀನ್‌ಪೊರಾ ಕುಂದ್ ಗ್ರಾಮದ ತನ್ವೀರ್, ಕುಂದ್‌ನ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಬಳಿಕ ವಾಲ್ಟಂಗೂನ ಸರ್ಕಾರಿ ಶಾಲೆಯಲ್ಲಿ ಪ್ರೌಢಶಿಕ್ಷಣ ಹಾಗೂ ರಜೂಲ್ ಕುಂದ್‌ನ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ 12ನೇ ತರಗತಿ ಪೂರೈಸಿದ್ದಾರೆ. ಆ ನಂತರ 2016ರಲ್ಲಿ ಅನಂತ್ನಾಗ್ನ ಸರ್ಕಾರಿ ಪದವಿ ಕಾಲೇಜಿನಲ್ಲಿ ಬಿಎ ಪದವಿ ಪಡೆದರು. ನಂತರ ಕಾಶ್ಮೀರ ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆಯಲ್ಲಿ 3ನೇ ರ್ಯಾಂಕ್ ಪಡೆದ ಅವರು, ಅರ್ಥಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದರು.
ಸ್ನಾತಕೋತ್ತರ ಪದವಿಯ ಅಂತಿಮ ವರ್ಷದಲ್ಲಿರುವಾಗಲೇ ಜೂನಿಯರ್ ರಿಸರ್ಚ್ ಫೆಲೋಶಿಪ್‌ಗೆ (ಜೆಆರ್‌ಎಫ್) ಆಯ್ಕೆಯಾದರು. ಅನಂತರ ಕೋಲ್ಕತ್ತಾದ ಇನ್‌ಸ್ಟಿಟ್ಯೂಟ್ ಆಫ್ ಡೆವಲಪ್ಮೆಂಟ್ ಸ್ಟಡೀಸ್‌ನಿಂದ 2021ರ ಏಪ್ರಿಲ್‌ನಲ್ಲಿ ಎಂ.ಫಿಲ್ ಪದವಿ ಪೂರೈಸಿದರು.
ಈ ಬಗ್ಗೆ ಮಾತನಾಡಿದ ತನ್ವೀರ್, 'ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ನಾನು ಐಇಎಸ್ ಪರೀಕ್ಷೆಗೆ ತಯಾರಿ ನಡೆಸಿದೆ. ಎಂ.ಫಿಲ್ ಓದಿನ ಜೊತೆಗೆ ಪರೀಕ್ಷೆ ತಯಾರಿಯೂ ಸಾಗಿತ್ತು. ನನ್ನ ಅಧ್ಯಯನಕ್ಕೆ ಕೋವಿಡ್ ಯಾವುದೇ ರೀತಿ ಪರಿಣಾಮ ಬೀರಿಲ್ಲ. ಅದಕ್ಕೆ ಬೇಕಾದ ನಿಗಾ ವಹಿಸಿದ್ದೆ' ಎಂದರು.