ನವದೆಹಲಿ:ಕೇಂದ್ರ ಸರ್ಕಾರದ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆ ಹಿಂಪಡೆದುಕೊಳ್ಳಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ರೈತರ ಎಲ್ಲ ಬೇಡಿಕೆ ಅಂಗೀಕಾರ ಮಾಡುವುದಾಗಿ ಕೇಂದ್ರ ಸರ್ಕಾರ ಲಿಖಿತ ರೂಪದಲ್ಲಿ ಒಪ್ಪಿಗೆ ನೀಡಿರುವ ಕಾರಣ ಅನ್ನದಾತರು ಈ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ಕೇಂದ್ರ ಸರ್ಕಾರ ಮೂರು ವಿವಾದಿತ ಕೃಷಿ ಕಾಯ್ದೆ ಜಾರಿಗೊಳಿಸುತ್ತಿದ್ದಂತೆ ರಸ್ತೆಗಿಳಿದು ಅನ್ನದಾತರು ಪ್ರತಿಭಟನೆ ನಡೆಸುತ್ತಿದ್ದು, ಈಗಾಗಲೇ ಒಂದು ವರ್ಷ ಪೂರೈಕೆಯಾಗಿದೆ. ಇದರ ಬೆನ್ನಲ್ಲೇ ಚಳಿಗಾಲದ ಅಧಿವೇಶನಕ್ಕೂ ಮುಂಚಿತವಾಗಿ ಕೇಂದ್ರ ಸರ್ಕಾರ ಮೂರು ಕೃಷಿ ಬಿಲ್ ಹಿಂಪಡೆದುಕೊಳ್ಳುವುದಾಗಿ ಘೋಷಣೆ ಮಾಡಿತ್ತು.
ಆದರೆ, ಕನಿಷ್ಠ ಬೆಂಬಲ ಬೆಲೆ, ರೈತರ ಮೇಲಿನ ಕ್ರಿಮಿನಲ್ ಪ್ರಕರಣ ಹಿಂಪಡೆದುಕೊಳ್ಳುವವರೆಗೂ ತಾವು ಪ್ರತಿಭಟನೆ ಮುಂದುವರೆಸುವುದಾಗಿ ರೈತರು ಕೇಂದ್ರಕ್ಕೆ ಪತ್ರ ಬರೆದಿದ್ದರು.
ಇದನ್ನೂ ಓದಿರಿ:ಕನಿಷ್ಠ ಬೆಂಬಲ ಬೆಲೆ ವಿಚಾರವಾಗಿ ಕೇಂದ್ರದೊಂದಿಗೆ ಮಾತುಕತೆ.. ಮಾಹಿತಿ ನೀಡಿದ ಸಂಯುಕ್ತ ಕಿಸಾನ್ ಮೋರ್ಚಾ
ಇದಾದ ಬಳಿಕ ಡಿಸೆಂಬರ್ 4ರಂದು ಸಭೆ ನಡೆಸಿದ್ದ ಸಂಯುಕ್ತ ಕಿಸಾನ್ ಮೂರ್ಚ್, ಕನಿಷ್ಠ ಬೆಂಬಲ ಬೆಲೆ ವಿಚಾರವಾಗಿ ಡಿಸೆಂಬರ್ 7ರಂದು ಕೇಂದ್ರದೊಂದಿಗೆ ಮಾತುಕತೆ ನಡೆಸುವುದಾಗಿ ಘೋಷಣೆ ಮಾಡಿತ್ತು. ಇದಕ್ಕಾಗಿ ಐವರು ಸದಸ್ಯರ ಸಮಿತಿ ಸಹ ರಚನೆ ಮಾಡಿತ್ತು. ಅದರಂತೆ ಇಂದು ಕೇಂದ್ರ ಹಾಗೂ ರೈತ ಸಮಿತಿ ಮಧ್ಯೆ ಮಾತುಕತೆ ನಡೆದಿದ್ದು, ರೈತರ ಎಲ್ಲ ಬೇಡಿಕೆ ಅಂಗೀಕಾರಕ್ಕಾಗಿ ತಾವು ಸಿದ್ಧ ಇರುವುದಾಗಿ ಕೇಂದ್ರ ತಿಳಿಸಿದೆ ಎನ್ನಲಾಗಿದೆ.
ಕನಿಷ್ಠ ಬೆಂಬಲ ಬೆಲೆ ವಿಚಾರವಾಗಿ ಸಮಿತಿ ರಚನೆ ಮಾಡುವುದಾಗಿ ತಿಳಿಸಿರುವ ಕೇಂದ್ರ, ರೈತರ ಮೇಲಿನ ಎಲ್ಲ ಪೊಲೀಸ್ ಪ್ರಕರಣ ಕೈಬಿಡುವುದಾಗಿ ತಿಳಿಸಿದೆ ಎನ್ನಲಾಗಿದೆ. ಹರಿಯಾಣದಲ್ಲಿ ಪ್ರತಿಭಟನೆ ನಡೆಸುತ್ತಿರುವ 40 ರೈತ ಸಂಘಟನೆಗಳು ಇಂದು ಮಹತ್ವದ ಸಭೆ ನಡೆಸುತ್ತಿವೆ. ಇದರ ಬೆನ್ನಲ್ಲೇ ರೈತರ ಎಲ್ಲ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಅಸ್ತು ಎಂದಿರುವ ಹಿನ್ನೆಲೆಯಲ್ಲಿ ತಮ್ಮ ಮುಂದಿನ ನಿರ್ಧಾರದ ಬಗ್ಗೆ ರೈತ ಸಂಘಟನೆ ನಾಳೆ ಅಂತಿಮ ನಿರ್ಧಾರ ಹೊರಹಾಕಲಿದೆ.