ಮಹಾರಾಷ್ಟ್ರ: ಮೂರು ಕೃಷಿ ಕಾಯ್ದೆಗಳ ವಿಚಾರವಾಗಿ ಕೇಂದ್ರಸರ್ಕಾರದ ಪರ ಬ್ಯಾಟಿಂಗ್ ಮಾಡಿದ್ದ ಭಾರತದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಮನೆಯ ಮುಂಭಾಗ ರೈತ ಸಂಘಟನೆಯ ಸದಸ್ಯನೊಬ್ಬ ಪ್ರತಿಭಟನೆ ನಡೆಸಿದ್ದಾನೆ.
ಅಮೆರಿಕಾದ ಪಾಪ್ ಗಾಯಕಿ ರಿಹಾನಾ, ಭಾರತದ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿ, ನಾವ್ಯಾಕೆ ಈ ವಿಷಯದ ಕುರಿತು ಚರ್ಚೆ ನಡೆಸುತ್ತಿಲ್ಲ ಎಂದು ಸುದ್ದಿಯೊಂದನ್ನು ಟ್ವೀಟ್ನಲ್ಲಿ ಪೋಸ್ಟ್ ಮಾಡಿದ್ದರು. ಜೊತೆಗೆ ಪರಿಸರ ಕಾರ್ಯಕರ್ತೆ ಗ್ರೇಟಾ ಥನ್‍ಬರ್ಗ್ ಕೂಡ ರೈತರಿಗೆ ಬೆಂಬಲ ಸೂಚಿಸುವ ಟ್ವೀಟ್ ಮಾಡಿದ್ದರು. ರಿಹಾನಾ ಮತ್ತು ಗ್ರೇಟಾ ಥನ್‍ಬರ್ಗ್ ಅವರ ಟ್ವೀಟ್ಗೆ ಜಗತ್ತಿನಾದ್ಯಂತ ಹೆಚ್ಚು ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಇದನ್ನೂ ಓದಿ...ರೈತರ ಪ್ರತಿಭಟನೆ: ಕೃಷಿ ಕಾನೂನಿಗೆ ಸಂಬಂಧಿಸಿದಂತೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ ಎರಡು 'ಆರ್'ಗಳು!
ಹೊರಗಿನ ದೇಶದವರು ರೈತರ ಸಮಸ್ಯೆಗಳ ಪರ ಧ್ವನಿ ಎತ್ತಿದ್ದಾರೆ. ನಮ್ಮವರು ಅದರಿಂದ ದೂರವಿದ್ದಾರೆ ಎಂದು ನೆಟ್ಟಿಗರು ಭಾರತದ ಪ್ರಮುಖ ಗಣ್ಯರ ವಿರುದ್ಧ ಕಿಡಿಕಾರಿದ್ದರು. ಇದಾದ ನಂತರ, ಭಾರತದ ಆಂತರಿಕ ವಿಷಯಗಳಲ್ಲಿ ವಿದೇಶಿಯರು ತಲೆಹಾಕಬಾರದು ಎಂದು ಸಚಿನ್ ಟ್ವೀಟ್ ಮಾಡಿದ್ದರು. ಈ ಟ್ವೀಟ್, ಹೋರಾಟ ಮಾಡುತ್ತಿರುವ ಕೆಲ ರೈತರು, ಮುಖಂಡರು ಮತ್ತು ಪರಿಸರ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿತ್ತು.
ಸಚಿನ್ ವಿರುದ್ಧ ಕೋಪಗೊಂಡಿದ್ದ ಸ್ವಾಭಿಮಾನಿ ಶೇತ್ಕರಿ ಸಂಘಟನೆಯ ಕಾರ್ಯಕರ್ತನೊಬ್ಬ ಇಂದು ಸಚಿನ್ ಮನೆಯ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ.
ಸಚಿನ್ ಟ್ವೀಟ್ ಹೀಗಿತ್ತು ನೋಡಿ...
ಭಾರತದ ಸೌರ್ವಭಾಮತ್ವದ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲಾಗದು. ವಿದೇಶಿ ಶಕ್ತಿಗಳು ಪ್ರೇಕ್ಷಕರಾಗಬಹುದೇ ವಿನಃ ದೇಶದೊಳಗಿನ ವಿಚಾರದಲ್ಲಿ ಹಸ್ತಕ್ಷೇಪ ಸಲ್ಲದು. ಭಾರತ ಏನು ಎಂಬುದು ಮತ್ತು ದೇಶಕ್ಕೆ ಏನು ಬೇಕೆಂಬುದನ್ನು ನಿರ್ಧರಿಸಲು ಭಾರತೀಯರಿಗೆ ಗೊತ್ತಿದೆ. ನಾವು ಒಗ್ಗಟ್ಟಿನಿಂದ ಇರಬೇಕಿದೆ ಎಂದು ಸಚಿನ್ ತೆಂಡೂಲ್ಕರ್ ಟ್ವೀಟ್ ಮಾಡಿದ್ದರು.