ನವದೆಹಲಿ: ಜುಲೈ 19 ರಿಂದ ಸಂಸತ್ ಅಧಿವೇಶನ ಪ್ರಾರಂಭವಾಗಿರುವ ಹಿನ್ನೆಲೆ ಯುನೈಟೆಡ್ ಕಿಸಾನ್ ಮೋರ್ಚಾ ಸಂಘಟನೆ ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದೆ. ಇಂದಿನಿಂದ (ಜುಲೈ 20) ರಿಂದ ಎಸ್ಕೆಎಂ ಸಂಘಟನೆಯ ಐವರು ಕಾರ್ಯಕರ್ತರು ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸಲಿದ್ದಾರೆ.
ರೈತರ ಬೇಡಿಕೆಗಳ ಪರವಾಗಿ ಸಂಸತ್ತಿನಲ್ಲಿ ದನಿ ಎತ್ತುವಂತೆ ವಿಪಕ್ಷಗಳಿಗೆ ಪತ್ರ ಬರೆಯಲಾಗುವುದು ಎಂದು ಎಸ್ಕೆಎಂ ತಿಳಿಸಿದೆ. ಕಳೆದ ಎಂಟು ತಿಂಗಳಿನಿಂದಲೂ ಸಿಂಘು ಗಡಿಯಲ್ಲಿ ನಡೆಯುತ್ತಿರುವ ರೈತರ ಆಂದೋಲನ ಮತ್ತು ಅವರ ಬೇಡಿಕೆಗಳನ್ನು ಈಡೇರಿಸಲು ವಿಪಕ್ಷಗಳು ಸರ್ಕಾರದ ಮೇಲೆ ಒತ್ತಡ ಹೇರಬೇಕು.
ಪ್ರತಿಪಕ್ಷಗಳು ಸಂಸತ್ನಲ್ಲಿ ಅನಗತ್ಯ ವಿಚಾರಗಳನ್ನು ಮಾತಾಡುವುದು, ರೈತ ಆಂದೋಲನದ ಬಗ್ಗೆ ದನಿ ಎತ್ತದಿರುವುದು ತರವಲ್ಲ. ಸಂಸತ್ನೊಳಗೆ ಅವರು ನಮ್ಮ ಪರ ಮಾತಾಡಬೇಕು. ನಾವು ಹೊರಗೆ ಪ್ರತಿಭಟನೆ ಮಾಡುತ್ತೇವೆ ಎಂದು ಭಾರತೀಯ ಕಿಸಾನ್ ಒಕ್ಕೂಟದ ರಾಷ್ಟ್ರೀಯ ಮಾಧ್ಯಮ ಉಸ್ತುವಾರಿ ಧರ್ಮೇಂದ್ರ ಮಲಿಕ್ ಹೇಳಿದ್ದಾರೆ.