ಸೋನಿಪತ್(ಹರಿಯಾಣ):ಅನ್ನದಾತರ ಬೃಹತ್ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ ಕೊನೆಗೂ ಮೂರು ಕೃಷಿ ಕಾನೂನುಗಳನ್ನು ರದ್ದು (Repeal of three farm laws) ಮಾಡುವುದಾಗಿ ನಿನ್ನೆ ಘೋಷಿಸಿದೆ. ಇದು ರೈತರ ಯಶಸ್ಸು ಎಂದು ಭಾರತೀಯ ಕಿಸಾನ್ ಯೂನಿಯನ್ ರಾಷ್ಟ್ರೀಯ ವಕ್ತಾರ (National spokesperson of Bhartiya Kisan Union) ರಾಕೇಶ್ ಟಿಕಾಯತ್ (Rakesh Tikait) ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ರೈತ ಚಳವಳಿ ತಕ್ಷಣವೇ ಕೊನೆಗೊಳ್ಳುವುದಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದ್ದರು.
ಎಲ್ಲ ರೈತ ಸಂಘಟನೆಗಳ ಮುಖಂಡರು ಶನಿವಾರವೇ ಚಳವಳಿ ಅಂತ್ಯಗೊಳಿಸುವ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂಬ ಮಾಹಿತಿ ರೈತ ಮುಖಂಡರಿಂದ ಬಂದಿತ್ತು. ಆದರೆ, ಇಂದು ಸಿಂಘು ಗಡಿಯಲ್ಲಿ ನಡೆಯಬೇಕಿದ್ದ ರೈತರ ಜಂಟಿ ಸಭೆಯನ್ನು ನಾಳೆಗೆ ಮುಂದೂಡಲಾಗಿದೆ. ಸಭೆ ಮುಂದೂಡಿಕೆಯಾಗಿದೆ ಎಂದು ಯುನೈಟೆಡ್ ಕಿಸಾನ್ ಮೋರ್ಚಾದ ಮುಖಂಡ ಡಾ. ದರ್ಶನ್ ಪಾಲ್ ಈಟಿವಿ ಭಾರತ ವರದಿಗಾರರಿಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.