ನವದೆಹಲಿ: ರಾಷ್ಟ್ರ ರಾಜಧಾನಿಯ ಗಡಿಯಲ್ಲಿ ರೈತರ ಪ್ರತಿಭಟನೆ 42 ನೇ ದಿನವೂ ಮುಂದುವರೆದಿದೆ. ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸಬೇಕು ಹಾಗೂ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಬೆಳೆಗಳನ್ನು ಖರೀದಿಸಬೇಕೆಂದು ಒತ್ತಾಯಿಸಿ, ರೈತ ಸಂಘಗಳ ಮುಖಂಡರು ಕರೆ ನೀಡಿದ್ದ ಟ್ರ್ಯಾಕ್ಟರ್ ಮಾರ್ಚ್ ಪ್ರಾರಂಭವಾಗಿದೆ.
ಇನ್ನು ರೈತರು ಟ್ರ್ಯಾಕ್ಟರ್ ರ‍್ಯಾಲಿಗೆ ಕರೆಕೊಟ್ಟ ಹಿನ್ನೆಲೆ ದೆಹಲಿ-ಸಿಂಘು ಗಡಿಯಲ್ಲಿ ಭಾರೀ ಭದ್ರತೆಯನ್ನು ನಿಯೋಜಿಸಲಾಗಿದೆ. ಪೂರ್ವ ಮತ್ತು ಪಶ್ಚಿಮ ವಲಯ ಸೇರಿದಂತೆ ದೆಹಲಿಯ ನಾಲ್ಕು ಗಡಿಗಳಲ್ಲಿ ಇಂದು ಟ್ರಾಕ್ಟರ್ ರ‍್ಯಾಲಿ ನಡೆಸಲು ರೈತರು ಸಜ್ಜಾಗಿದ್ದಾರೆ.
ಆಂದೋಲನವನ್ನು ತೀವ್ರಗೊಳಿಸಿ, ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಿದ್ಧತೆಗಳು ನಡೆಯುತ್ತಿವೆ ಎಂದು ಪಂಜಾಬ್‌ನ ರೈತ ಮುಖಂಡ ಮತ್ತು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಪ್ರಧಾನ ಕಾರ್ಯದರ್ಶಿ ಹರಿಂದರ್ ಸಿಂಗ್ ಲಖೋವಾಲ್ ತಿಳಿಸಿದ್ದಾರೆ. ಮೆರವಣಿಗೆಗೆ ಪಂಜಾಬ್‌ನ ರೈತರು ತಮ್ಮ ಟ್ರಾಕ್ಟರುಗಳೊಂದಿಗೆ ಬರುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು.