ಮುಕ್ತಸರ್ (ಪಂಜಾಬ್): ಬಿಜೆಪಿ ಶಾಸಕ ಅರುಣ್ ನಾರಂಗ್ ಅವರ ಮೇಲೆ ಹಲ್ಲೆ ನಡೆಸಿದ ರೈತರ ವಿರುದ್ಧ ಎಫ್‌ಐಆರ್ ದಾಖಲಿಸಿರುವುದನ್ನು ವಿರೋಧಿಸಿ ಪ್ರತಿಭಟಿಸುತ್ತಿದ್ದರು. ಸೋಮವಾರ ಪಂಜಾಬ್ ಪೊಲೀಸರು ಕಟ್ಟುನಿಟ್ಟಾದ ಸಾಕ್ಷ್ಯ ಆಧಾರಿತ ತನಿಖೆಯ ಭರವಸೆ ನೀಡಿದ್ದರಿಂದ ತಮ್ಮ ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ.
ಯಾವುದೇ ನಿರಪರಾಧಿಗೆ ಶಿಕ್ಷೆಯಾಗುವುದಿಲ್ಲ ಮತ್ತು ಸಾಕ್ಷ್ಯ ಆಧಾರಿತ ತನಿಖೆ ನಡೆಸಲಾಗುವುದು ಎಂದು ಪಂಜಾಬ್ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ:ಬಿಜೆಪಿ ಶಾಸಕನ ಶರ್ಟ್ ಹರಿದು ಹಲ್ಲೆಗೈದ ಪ್ರಕರಣ: 300 ಜನರ ವಿರುದ್ಧ ಎಫ್‌ಐಆರ್
ಪಂಜಾಬ್‌ನಲ್ಲಿ ಕೇಂದ್ರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆ ವೇಳೆ ಮುಕ್ತಸರ್ ಜಿಲ್ಲೆಯ ಮಾಲೌಟ್‌ನಲ್ಲಿ ಪ್ರತಿಭಟನಾನಿರತ ರೈತರ ಗುಂಪೊಂದು ಮಾ.27 ರಂದು ಬಿಜೆಪಿ ಶಾಸಕರೊಬ್ಬರ ಮೇಲೆ ಹಲ್ಲೆನಡೆಸಿ, ಬಟ್ಟೆ ಹರಿದು ಹಾಕಿದೆ ಎಂಬ ಆರೋಪ ಕೇಳಿಬಂದಿತ್ತು. ಬಿಜೆಪಿ ಶಾಸಕ ಅರುಣ್ ನಾರಂಗ್ ಮೇಲಿನ ಹಲ್ಲೆ ಮತ್ತು ಬಟ್ಟೆ ಹರಿದ ಪ್ರಕರಣಕ್ಕೆ ಸಂಬಂಧಿಸಿದಂತೆ 250 ರಿಂದ 300 ಕ್ಕೂ ಹೆಚ್ಚು ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.