ದೆಹಲಿ :ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾನೂನುಗಳ ವಿರುದ್ಧ ಅನ್ನದಾತರು ಸಿಡಿದೆದ್ದಿದ್ದಾರೆ. ನಾನಾ ರಾಜ್ಯಗಳಿಂದ ದೆಹಲಿ ಚಲೋಗೆ ಕರೆ ಕೊಟ್ಟಿರುವ ರೈತರು, ದೆಹಲಿಗೆ ಲಗ್ಗೆ ಇಟ್ಟಿದ್ದಾರೆ. ಪ್ರತಿಭಟನೆಗಾಗಿ ರಾಷ್ಟ್ರ ರಾಜಧಾನಿಯಲ್ಲಿ ಒಂದು ಮೈದಾನ ಮೀಸಲಿಟ್ಟಿದ್ದರೂ, ಹೆಚ್ಚಿನ ರೈತರು ದೆಹಲಿ ಗಡಿಯಲ್ಲಿ ಬೀಡು ಬಿಟ್ಟಿದ್ದಾರೆ.
ದೆಹಲಿಯಲ್ಲಿ ತೀವ್ರಗೊಂಡ ಅನ್ನದಾತರ ಪ್ರತಿಭಟನೆ ಜನರನ್ನು ಚದುರಿಸಲು ಪೊಲೀಸರು, ಅಶ್ರುವಾಯು ಪ್ರಯೋಗ, ಲಾಠಿಚಾರ್ಜ್ ಮಾಡುತ್ತಿದ್ದಾರೆ. ಇವೆಲ್ಲವುದರ ಮಧ್ಯೆಯೂ ಪ್ರತಿಭಟನಾಕಾರರು ತಮ್ಮ ಬೇಡಿಕೆ ಈಡೇರುವವರೆಗೆ ಧರಣಿ ಮುಂದುವರಿಸುವುದಾಗಿ ಎಚ್ಚರಿಸಿದ್ದಾರೆ.
ಮೂರು ಹೆದ್ದಾರಿಗಳು ಬಂದ್
ಈಗಾಗಲೇ ದೆಹಲಿಯಲ್ಲಿ ಪ್ರತಿಭಟನಾಕಾರರ ಸಂಖ್ಯೆ ಹೆಚ್ಚಾಗಿದೆ. ವಿವಿಧ ರಾಜ್ಯಗಳಿಂದ ಆಗಮಿಸುತ್ತಿರುವವರ ಸಂಖ್ಯೆಯಂತೂ ಮಿತಿ ಮೀರುತ್ತಿದೆ. ಹೀಗಾಗಿ ದೆಹಲಿ ಸಂಪರ್ಕಿಸುವ ಮೂರು ಹೆದ್ದಾರಿಗಳನ್ನು ಬಂದ್ ಮಾಡಲಾಗಿದೆ.
11 ರೈತ ಮುಖಂಡರ ವಿರುದ್ಧ ಎಫ್ಐಆರ್
ಹರಿಯಾಣದಿಂದ ದೆಹಲಿಯತ್ತ ಸಾಗುತ್ತಿದ್ದ ರೈತರನ್ನು ಪೊಲೀಸರು ಬ್ಯಾರಿಕೇಡ್ ಹಾಕಿ ತಡೆದಿದ್ದಾರೆ. ಇದರಿಂದ ರೊಚ್ಚಿಗೆದ್ದ ಮುಖಂಡರು, ಬ್ಯಾರಿಕೇಟ್ ಮುರಿದು ಮುಂದಕ್ಕೆ ಸಾಗಿದ್ದಾರೆ. ಹೀಗಾಗಿ 11 ರೈತ ಮುಖಂಡರ ವಿರುದ್ಧ ಐಪಿಸಿ ಸೆಕ್ಷನ್ 114, 147, 148, 149,186, 158, 332, 375, 307, 283 120 ಬಿ ಮತ್ತು ವಿಪತ್ತು ನಿರ್ವಹಣಾ ಕಾಯ್ದೆಯ 51 ಬಿ ಮತ್ತು ಪಿಡಿಪಿ ಎಸಿ ಸೆಕ್ಷನ್ 3ರ ಅಡಿ ಪ್ರಕರಣ ದಾಖಲಿಸಲಾಗಿದೆ.
ಟೈರ್ಗೆ ಬೆಂಕಿ ಹಚ್ಚಿ ಆಕ್ರೋಶ
ದೆಹಲಿ ಮೈದಾನದಲ್ಲಿ ಮಾತ್ರವಲ್ಲದೆ ಹರಿಯಾಣ ಗಡಿಯಲ್ಲೂ ಅನ್ನದಾತರು ಪ್ರತಿಭಟನೆ ನಡೆಸುತ್ತಿದ್ದಾರೆ. ಟೈರ್ಗೆ ಬೆಂಕಿ ಹಚ್ಚಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ. ನೀವು ನೀಡಿರುವ ನಿರಂಕರಿ ಮೈದಾನದ ಜಾಗ ನಮ್ಮ ಪ್ರತಿಭಟನೆಗೆ ಸಾಕಾಗಲ್ಲ. ಬದಲಿಗೆ ಜಂತರ್ ಮಂತರ್ನಲ್ಲಿ ಅವಕಾಶ ಮಾಡಿಕೊಡಿ ಎಂದು ಪೊಲೀಸರಿಗೆ ಒತ್ತಾಯಿಸುತ್ತಿದ್ದಾರೆ.
ಗಡಿಯಲ್ಲಿ ಖಾಕಿ ಕಟ್ಟೆಚ್ಚರ
ಪಂಜಾಬ್, ಹರಿಯಾಣ, ಉತ್ತರಪ್ರದೇಶ ಸೇರಿ ನಾನಾ ರಾಜ್ಯಗಳಿಂದ ದೆಹಲಿಯತ್ತ ಮೆರವಣಿಗೆ ಮೂಲಕ ಬರುತ್ತಿರುವ ರೈತರನ್ನು ತಡೆಯಲು ಗಡಿಯಲ್ಲಿ ಪೊಲೀಸ್ ಇಲಾಖೆ ಮೊಕ್ಕಾಂ ಹೂಡಿದೆ. ರೈತರ ಸಮಸ್ಯೆ ಬಗೆಹರಿಸಲು ಕೇಂದ್ರ ಸರ್ಕಾರ ವಿಫಲವಾಗಿದೆ.
ಜತೆಗೆ ರೈತ ವಿರೋಧಿ ಕಾನೂನುಗಳನ್ನು ಜಾರಿಗೆ ತರುವುದರ ಮೂಲಕ, ಈಗಾಗಲೇ ಕಷ್ಟದಲ್ಲಿರುವ ರೈತರಿಗೆ ಗಾಯದ ಮೇಲೆ ಬರೆ ಎಳೆಯುತ್ತಿದೆ. ಕೇಂದ್ರ ಸರ್ಕಾರ ಕೂಡಲೇ ಕಾಯ್ದೆಗಳನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ ಪ್ರತಿಭಟನೆ ಮತ್ತಷ್ಟು ತೀವ್ರಗೊಳಿಸುತ್ತೇವೆ ಎಂದು ರೈತ ಮುಖಂಡರು ಗುಡುಗಿದ್ದಾರೆ.