ನವದೆಹಲಿ :ತಿದ್ದುಪಡಿ ಮಾಡಲು ಸರ್ಕಾರ ಸಿದ್ಧವಾಗಿದೆ ಅಂದರೆ ಅದರರ್ಥ ಕೃಷಿ ಕಾನೂನುಗಳಲ್ಲಿ ಸಮಸ್ಯೆ ಇದೆ ಎಂದಲ್ಲ. ಕೃಷಿ ಕಾನೂನುಗಳ ಬಗ್ಗೆ ಕೆಲ ರಾಜ್ಯಗಳ ರೈತರಿಗೆ ತಪ್ಪು ಮಾಹಿತಿ ನೀಡಲಾಗಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದರು.
ಇಂದಿನ ರಾಜ್ಯಸಭಾ ಕಲಾಪದಲ್ಲಿ ಮಾತನಾಡಿದ ಸಚಿವರು, ಕೃಷಿ ಕಾನೂನುಗಳನ್ನು ಜಾರಿಗೆ ತಂದರೆ ಇತರರು ತಮ್ಮ ಭೂಮಿಯನ್ನು ಆಕ್ರಮಿಸಿಕೊಳ್ಳುತ್ತಾರೆ ಎಂದು ಹೇಳಿ ರೈತರನ್ನು ದಾರಿ ತಪ್ಪಿಸಲಾಗುತ್ತಿದೆ. ಯಾವುದೇ ವ್ಯಾಪಾರಿಯು ಯಾವುದೇ ರೈತನ ಭೂಮಿಯನ್ನು ಕಸಿದುಕೊಳ್ಳಲು ಅನುವು ಮಾಡಿಕೊಡುವಂತಹ ಯಾವುದೇ ಒಂದು ನಿಬಂಧನೆ ಈ ಕಾಯ್ದೆಗಳಲ್ಲಿ ಇದ್ದರೆ ನನಗೆ ತಿಳಿಸಿ ಎಂದು ಸಚಿವರು ಸವಾಲೆಸಿದಿದ್ದಾರೆ.
ರೈತರ ಕಲ್ಯಾಣಕ್ಕಾಗಿ ಪಿಎಂ ಮೋದಿ ಬದ್ಧ :ರೈತರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರುವುದು, ರೈತರ ಆದಾಯ ದ್ವಿಗುಣಗೊಳಿಸುವುದು ನಮ್ಮ ಉದ್ದೇಶ. ಇದರಿಂದ ಜಿಡಿಪಿಗೆ ಕೃಷಿಯ ಕೊಡುಗೆ ವೇಗವಾಗಿ ಹೆಚ್ಚಾಗುತ್ತದೆ. ಕೃಷಿ ಕಾನೂನುಗಳು ಈ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ರೈತರ ಕಲ್ಯಾಣಕ್ಕಾಗಿ ಬದ್ಧರಾಗಿದ್ದಾರೆ ಎಂದು ನಾನು ಈ ಸದನಕ್ಕೆ ಹಾಗೂ ರೈತರಿಗೆ ಹೇಳಲು ಬಯಸುತ್ತೇನೆ ಎಂದು ತೋಮರ್ ತಿಳಿಸಿದರು.
ಗ್ರಾಮೀಣ ಜನರ ಜೀವನದಲ್ಲಿ ಬದಲಾವಣೆ :ಸರ್ಕಾರದ ಬಡವರ ಪರ ಯೋಜನೆಗಳು ಗ್ರಾಮಗಳಲ್ಲಿ ವಾಸಿಸುವ ಜನರ ಜೀವನದಲ್ಲಿ ಬದಲಾವಣೆ ತಂದಿದೆ. 15ನೇ ಹಣಕಾಸು ಆಯೋಗವು ಗ್ರಾಮ ಪಂಚಾಯತ್ಗಳಿಗೆ 2.36 ಲಕ್ಷ ಕೋಟಿ ರೂ. ಅನುದಾನ ನೀಡಲು ಶಿಫಾರಸು ಮಾಡಿದ್ದು, ಇದನ್ನು ಸಂಪುಟ ಅಂಗೀಕರಿಸಿದೆ.
ಗ್ರಾಮೀಣ ಪ್ರದೇಶಗಳಲ್ಲಿನ ಆರೋಗ್ಯ ಸೇವೆಗಾಗಿ ಸುಮಾರು 43,000 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. 5 ವರ್ಷಗಳಲ್ಲಿ ಗ್ರಾಮ ಪಂಚಾಯತ್‌ಗಳ ಮೂಲಕ 2.8 ಲಕ್ಷ ಕೋಟಿ ರೂಪಾಯಿಗಳನ್ನು ಹಳ್ಳಿಗಳಲ್ಲಿ ಅಭಿವೃದ್ಧಿಗೆ ವೆಚ್ಚ ಮಾಡಲಾಗುವುದು ಎಂದು ಇದೇ ವೇಳೆ ಹೇಳಿದರು.
ಮನ್ರೇಗಾ ಯೋಜನೆಯಡಿ ಉದ್ಯೋಗ :ಇನ್ನು, ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ (ಮನ್ರೇಗಾ-MGNREGA) ಬಗ್ಗೆ ಮಾಹಿತಿ ನೀಡಿದ ನರೇಂದ್ರ ಸಿಂಗ್ ತೋಮರ್, ನಾವು ನಿರಂತರವಾಗಿ ಮನ್ರೇಗಾ ನಿಧಿ ಹೆಚ್ಚಿಸಿದ್ದೇವೆ. ದೇಶಕ್ಕೆ ಕೊರೊನಾ ಹೊಡೆತ ನೀಡಿದಾಗ ನಾವು ಈ ನಿಧಿಯನ್ನು 61,000 ಕೋಟಿ ರೂ.ಗಳಿಂದ 1.115 ಲಕ್ಷ ಕೋಟಿಗಳಿಗೆ ಹೆಚ್ಚಿಸಿದ್ದೇವೆ. ಮನ್ರೇಗಾ ಯೋಜನೆಯಡಿ 10 ಕೋಟಿಗೂ ಹೆಚ್ಚು ಜನರಿಗೆ ಉದ್ಯೋಗ ನೀಡಲಾಗಿದೆ ಎಂದು ವಿವರಿಸಿದರು.
ಕನಿಷ್ಠ ಬೆಂಬಲ ಬೆಲೆ :ನಾವು ಉತ್ಪಾದನಾ ವೆಚ್ಚಕ್ಕಿಂತ ಶೇ.50ಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ನೀಡಲು ಪ್ರಾರಂಭಿಸಿದ್ದೇವೆ. ಅಲ್ಲದೇ ಆತ್ಮನಿರ್ಭರ್ ಆರ್ಥಿಕ ಪ್ಯಾಕೇಜ್ ಅಡಿಯಲ್ಲಿ ಕೃಷಿ ಮೂಲಸೌಕರ್ಯ ವೃದ್ಧಿಸಲು 1 ಲಕ್ಷ ಕೋಟಿ ರೂ. ಬಿಡುಗಡೆ ಮಾಡಿದ್ದೇವೆ. ಕೃಷಿ ಕ್ಷೇತ್ರದಲ್ಲಿ ಅಗತ್ಯ ಹೂಡಿಕೆಗಾಗಿ ನಾವು ಪ್ರಯತ್ನಿಸಿದ್ದೇವೆ ಎಂದು ನರೇಂದ್ರ ಸಿಂಗ್ ತೋಮರ್ ಹೇಳಿದರು.