ನವದೆಹಲಿ :ರೈತರು "ಅನ್ನದಾತರು" ಮತ್ತು "ಆರ್ಥಿಕತೆಯ ಬೆನ್ನೆಲುಬು" ಎಂದಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಪ್ರತಿಭಟಿಸುವ ಹಿನ್ನೆಲೆಯಲ್ಲಿ ರೈತರನ್ನು "ನಕ್ಸಲ್ಸ್" ಅಥವಾ "ಖಲಿಸ್ತಾನಿಗಳು" ಎಂಬ ಟೀಕೆಗಳನ್ನು ಬಲವವಾಗಿ ವಿರೋಧಿಸಿದ್ದಾರೆ.
ವಿಶೇಷ ಸಂದರ್ಶನ ಸುದ್ದಿ ಸಂಸ್ಥೆಯೊಂದಕ್ಕೆ ಪ್ರತಿಕ್ರಿಯಿಸಿರುವ ಅವರು, ರೈತರ ಹಿತದೃಷ್ಟಿಯಿಂದ ಕೃಷಿ ಕಾನೂನುಗಳನ್ನು ಮಾಡಲಾಗಿದೆ ಮತ್ತು ಪ್ರತಿಭಟನಾನಿರತ ರೈತರು ಎರಡು ವರ್ಷಗಳ ಕಾಲ ಅವುಗಳ ಅನುಷ್ಠಾನವನ್ನು ಕಾದು ನೋಡಬೇಕು ಎಂದು ಹೇಳಿದ್ದಾರೆ.
ರೈತರ ಪ್ರತಿಭಟನೆಯಿಂದ ಸರ್ಕಾರಕ್ಕೆ ನೋವುಂಟಾಗಿದೆ ಎಂದ ಅವರು, ಪ್ರತಿಭಟಿಸುವ ಹಿನ್ನೆಲೆಯಲ್ಲಿ ರೈತರ ವಿರುದ್ಧ ಈ ಹಿಂದೆ ಮಾಡಿದ "ನಕ್ಸಲ್ಸ್" ಅಥವಾ "ಖಲಿಸ್ತಾನಿ" ಟೀಕೆಗಳ ಬಗ್ಗೆ ಕೇಳಿದಾಗ, ಅಂತಹ ಆರೋಪಗಳನ್ನು ಮಾಡಬಾರದು ಎಂದಿದ್ದಾರೆ.
"ಯಾರೂ ಕೂಡ ರೈತರ ವಿರುದ್ಧ ಈ ಆರೋಪಗಳನ್ನು ಮಾಡಬಾರದು. ನಾವು ನಮ್ಮ ರೈತರ ಬಗ್ಗೆ ನಮ್ಮ ಆಳವಾದ ಗೌರವವನ್ನು ಹೊಂದಿದ್ದೇವೆ, ರೈತರ ಮುಂದೆ ನಮ್ಮ ತಲೆಗಳು ಗೌರವದಿಂದ ಬಾಗುತ್ತವೆ. ಅವರು ನಮ್ಮ 'ಅನ್ನದಾತರು'.
ಆರ್ಥಿಕ ಹಿಂಜರಿತದ ಸಮಯದಲ್ಲಿ, ರೈತರು ಆರ್ಥಿಕತೆಯನ್ನು ತೊಂದರೆಯಿಂದ ಹೊರ ತರುವ ಜವಾಬ್ದಾರಿ ನಿರ್ವಹಿಸಿದ್ದಾರೆ. ಅವರು ಆರ್ಥಿಕತೆಯ ಬೆನ್ನೆಲುಬು. ಹಲವಾರು ಸಂದರ್ಭಗಳಲ್ಲಿ ತೊಂದರೆಗೀಡಾದ ರಾಷ್ಟ್ರವನ್ನು ಸಂಕಷ್ಟದಿಂದ ಪಾರು ಮಾಡಿದ್ದಾರೆ"ಎಂದು ರಕ್ಷಣಾ ಸಚಿವರು ಹೇಳಿದ್ದಾರೆ.
ಓದಿಗಡಿಯಲ್ಲಿ ಯಾರೇ ತೊಂದರೆ ಕೊಟ್ಟರೂ ಅವರನ್ನು ಉಳಿಸುವುದಿಲ್ಲ : ರಾಜನಾಥ್ ಸಿಂಗ್ ಎಚ್ಚರಿಕೆ
ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಸರ್ಕಾರದೊಂದಿಗೆ ಪ್ರತಿ ಷರತ್ತುಗಳ ಬಗ್ಗೆ ತಾರ್ಕಿಕ ಚರ್ಚೆಯಲ್ಲಿ ತೊಡಗಬೇಕು ಎಂದು ಸಲಹೆ ನೀಡಿದ್ದಾರೆ. "ರೈತರಿಗೆ ನನ್ನ ಸಲಹೆ ಏನೆಂದ್ರೆ, ಕೃಷಿ ಕಾನೂನುಗಳ ಪ್ರತಿ ಷರತ್ತುಗಳ ಬಗ್ಗೆ ತಾರ್ಕಿಕ ಚರ್ಚೆ ನಡೆಯಬೇಕು. ಅಲ್ಲಿ ರೈತರ ಹಿತಾಸಕ್ತಿಗೆ ವಿರುದ್ಧವಾಗಿ ಏನಾದ್ರೂ ಇದೆ ಎಂದು ಭಾವಿಸಲಾದ್ರೆ, ಅವರ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರವು ಅಗತ್ಯ ಕಾರ್ಯ ಮಾಡುತ್ತದೆ" ಎಂದಿದ್ದಾರೆ.