ಸೊಲ್ಲಾಪುರ(ಮಹಾರಾಷ್ಟ್ರ):ಆಗಾಗ್ಗೆ ಈರುಳ್ಳಿ ದರ ಗಗನಕ್ಕೇರೋ ಮೂಲಕ ಗ್ರಾಹಕರ ಕಣ್ಣಲ್ಲಿ ನೀರು ತರಿಸೋದು ಸಾಮಾನ್ಯ. ಆದ್ರೆ ಮಹಾರಾಷ್ಟ್ರ ರೈತನೋರ್ವನಿಗೆ ಈರುಳ್ಳಿ ತಂದ ಲಾಭದ ಮೊತ್ತ ಕಣ್ಣೀರು ತರಿಸಿದೆ. ಹೌದು, 1,123 ಕೆ.ಜಿ ಈರುಳ್ಳಿ ಮಾರಾಟ ಮಾಡಿದ್ದ ರೈತನಿಗೆ ಕೇವಲ 13 ರೂ. ಲಾಭವಾಗಿ ಬಂದಿದೆ. ಇದರಿಂದ ರೈತ ಕಂಗಾಲಾಗಿದ್ದು, ಅವರ ಈರುಳ್ಳಿ ಮಾರಾಟದ ರಸೀದಿ ವೈರಲ್ ಆಗಿದೆ.
ಈ ಕುರಿತು ಮಾತನಾಡಿರುವ ರೈತ ಮುಖಂಡ ರಾಜು ಶೆಟ್ಟಿಎಂಬುವರು ಗದ್ದೆಯಲ್ಲಿ ಬೆವರು ಸುರಿಸಿ ಬೆಳೆದ ಬೆಳೆಗೆ ಬೆಲೆ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ. ಎರಡು ದಿನಗಳ ಹಿಂದೆ ಸೊಲ್ಲಾಪುರ ಜಿಲ್ಲೆಯ ರೈತ ಬಾಪು ಕಾವಡೆ ಅವರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ವ್ಯಾಪಾರಿ ರುದ್ರೇಶ ಪಾಟೀಲ ಎಂಬುವರಿಗೆ 24 ಚೀಲ ಈರುಳ್ಳಿ ಮಾರಾಟ ಮಾಡಿದ್ದರು. ಈರುಳ್ಳಿ ಕಡಿಮೆ ದರಕ್ಕೆ ಮಾರಾಟವಾಯಿತು. ಸುಮಾರು 1,123 ಕೆಜಿ ಈರುಳ್ಳಿ ಮಾರಾಟ ಮಾಡಿ ರೂ. 1,665 ಅನ್ನು ಪಡೆದರು. ಆದರೆ, ಸರಕು ಸಾಗಣೆ, ವಾಹನ ದರ ಸೇರಿದಂತೆ ಕೆಲ ಖರ್ಚುವೆಚ್ಚ ಕಳೆದ ನಂತರ ಬಾಪು ಕಾವಡೆ ಅವರಿಗೆ ಕೇವಲ 13 ರೂಪಾಯಿ ಮಾತ್ರ ಉಳಿದಿದೆ.