ಮಹೆಬೂಬ್ನಗರ (ತೆಲಂಗಾಣ): ಒಂದು ಎಕರೆ ಭೂಮಿಯಲ್ಲಿ ವಿವಿಧ ಬಗೆಯ ತರಕಾರಿ ಬೆಳೆಯುವ ಮೂಲಕ ತೆಲಂಗಾಣ ರಾಜ್ಯದ ಮಹೆಬೂಬ್ನಗರ ಜಿಲ್ಲೆಯ ರೈತ ಲಾಭದಾಯಕ ಮಾರ್ಗವನ್ನು ಕಂಡುಕೊಂಡಿದ್ದಾರೆ. ಇತರ ರೈತರು ಹತ್ತು ಎಕರೆಯಲ್ಲಿ ಭತ್ತ ಬೆಳೆದು ಪಡೆಯುವ ಲಾಭ ಕೇವಲ ಒಂದು ಎಕರೆಯ ತರಕಾರಿಯಲ್ಲಿ ಬರುತ್ತಿದೆ.
ಹೌದು, ಅಚ್ಚರಿಯಾದರೂ ಇದು ಸತ್ಯ. ಜಿಲ್ಲೆಯ ಗುಡಿ ಮಲ್ಕಾಪುರ ಗ್ರಾಮದ ರೈತ ವೆಂಕಟ್ ರೆಡ್ಡಿ 2.5 ಎಕರೆ ಜಮೀನು ಹೊಂದಿದ್ದು, ಕಳೆದ ಮೂರು ವರ್ಷಗಳಿಂದ ಒಂದು ಎಕರೆ ಜಮೀನಿನಲ್ಲಿ ತರಕಾರಿ ಬೆಳೆಯಲು ಆರಂಭಿಸಿದ್ದಾರೆ. ಹಾಗಲಕಾಯಿ, ಸೋರೆಕಾಯಿ, ಬದನೆಕಾಯಿ, ಕಲ್ಲಂಗಡಿ, ಮೆಕ್ಕೆಜೋಳ ಹಾಗೂ ಸೀಬೆಕಾಯಿ ಹೀಗೆ ಒಂದು ಎಕರೆಯಲ್ಲಿ ವಿವಿಧ ತರಕಾರಿ ಕೃಷಿ ಮಾಡುತ್ತಿದ್ದಾರೆ. ಯಾವುದೇ ಕೂಲಿಕಾರರ ನೆರವಿಲ್ಲದೇ ತಮ್ಮ ಪತ್ನಿಯ ಸಹಾಯದಿಂದಲೇ ತರಕಾರಿ ಬೆಳೆಯುತ್ತಿದ್ದು, ಜಮೀನಿನಲ್ಲಿ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ.
ಒಂದೇ ಎಕರೆಯಲ್ಲಿ ವಿವಿಧ ತರಕಾರಿ ಬೆಳೆದು ತಿಂಗಳಿಗೆ ಲಕ್ಷಾಂತರ ರೂಪಾಯಿ ಗಳಿಸುವ ರೈತ! ಒಂದು ತರಕಾರಿ ಬೆಳೆಯ ನಂತರ ಮತ್ತೊಂದು ತರಕಾರಿಯನ್ನು ವೆಂಕಟ್ರೆಡ್ಡಿ ಬೆಳೆಯುತ್ತಿದ್ದಾರೆ. ಹೀಗೆ ಏಕಕಾಲಕ್ಕೆ ನಾಲ್ಕು ತರಕಾರಿ ಬೆಳೆಯುವ ಸುಲಭದ ಮಾರ್ಗವನ್ನು ಕಂಡುಕೊಂಡಿದ್ದಾರೆ. ಇದರಿಂದ ಪ್ರತಿ ತಿಂಗಳಿಗೆ ಕನಿಷ್ಠ ಒಂದು ಲಕ್ಷ ರೂ. ಲಾಭವನ್ನು ಪಡೆಯುತ್ತಿದ್ದಾರೆ. ಕೆಲ ಬೆಳೆಗಳು 45 ದಿನಗಳಲ್ಲಿ ಫಸಲು ಬರುತ್ತಿದ್ದು, ವೆಚ್ಚವೂ ಕಡಿಮೆ ಆಗುತ್ತಿದೆ. ತಾವು ಬೆಳೆದ ತರಕಾರಿಯನ್ನು ಮಹೆಬೂಬ್ನಗರ ಮಾರುಕಟ್ಟೆಗೆ ಮಾರಾಟ ಮಾಡುತ್ತಿದ್ದಾರೆ.
ತರಕಾರಿ ಕೃಷಿಯಲ್ಲಿ ಸಾಕಷ್ಟು ಲಾಭ ಬರುತ್ತಿದೆ. ಭತ್ತ ಬೆಳೆಯುವ ರೈತರಿಗಿಂತ ನಾನು ಹೆಚ್ಚಿನ ಲಾಭವನ್ನು ಪಡೆಯುತ್ತಿದ್ದೇನೆ. ಒಂದು ಎಕರೆಯಲ್ಲಿ ನಾಲ್ಕು ತರಕಾರಿ ಬೆಳೆದರೆ ಲಾಭ ಬರುತ್ತದೆ. ಸಂಪೂರ್ಣ ಇಳುವರಿ ನಂತರ ಪ್ರತಿ ತಿಂಗಳಿಗೆ ಒಂದು ಲಕ್ಷದಷ್ಟು ಲಾಭ ಕಾಣುತ್ತಿದ್ದೇನೆ. ಅಲ್ಲದೇ, ನಾನು ಯಾವುದೇ ಕೂಲಿಕಾರರ ಮೇಲೂ ಅವಲಂಬನೆ ಆಗುವ ಪರಿಸ್ಥಿತಿಯೇ ಉದ್ಭವಾಗಿಲ್ಲ ಎಂದು ರೈತ ವೆಂಕಟ್ ರೆಡ್ಡಿ ಹೇಳುತ್ತಾರೆ.