ಕರ್ನಾಟಕ

karnataka

ETV Bharat / bharat

ಕೇಂದ್ರ ಜಾರಿಗೊಳಿಸಿರುವ ಕೃಷಿ ಕಾಯ್ದೆಗಳು ಯಾವುವು? ಅವುಗಳ ಬಗ್ಗೆ ನಿಮಗೆಷ್ಟು ಗೊತ್ತು? - ಭಾರತ್ ಬಂದ್

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಕೃಷಿ ಕಾಯ್ದೆಗಳನ್ನು ವಿರೋಧಿಸುವವರು ಹಾಗೂ ಬೆಂಬಲಿಸುವವರಿಗೆ ಆ ಕಾಯ್ದೆಗಳ ಬಗ್ಗೆ ಎಷ್ಟು ಗೊತ್ತು? ಕೃಷಿ ಕಾಯ್ದೆಗಳಿಂದಾಗುವ ಅನುಕೂಲ, ಅನಾನುಕೂಲಗಳ ಬಗ್ಗೆ ಇಲ್ಲಿದೆ ಒಂದಿಷ್ಟು ಮಾಹಿತಿ.

former protest
former protest

By

Published : Sep 27, 2021, 7:47 AM IST

ನವದೆಹಲಿ/ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳ ರದ್ದತಿಗೆ ಒತ್ತಾಯಿಸಿ ದೇಶದಾದ್ಯಂತ ಅನ್ನದಾತರು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಬಿಸಿಲು, ಗಾಳಿ-ಮಳೆ ಲೆಕ್ಕಿಸದೇ ಗಡಿಯಲ್ಲಿ ರೈತರು ನಿರಂತರ ಹೋರಾಟಕ್ಕಿಳಿದಿದ್ದಾರೆ. ಕೇಂದ್ರ ಜಾರಿಗೊಳಿಸಿರುವ ಈ ಮೂರು ಕಾಯ್ದೆಗಳು ರೈತರಿಗೆ ಮರಣ ಶಾಸನ ಎಂಬ ಮಾತುಗಳು ಕೇಳಿ ಬರ್ತಿವೆ. ಹಾಗಾದ್ರೆ, ಈ ಕಾಯ್ದೆಯಲ್ಲಿ ಅಂಥ ಅಂಶಗಳೇನಿವೆ? ಅದನ್ನು ರೈತರು ವಿರೋಧಿಸುತ್ತಿರುವುದೇಕೆ? ಆ ಕುರಿತ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.

ಕಾಯ್ದೆಗಳ ಪ್ರಮುಖ ಅಂಶಗಳು

ಕೃಷಿ ಮಾರುಕಟ್ಟೆ ಕಾಯ್ದೆ

  • ಕೃಷಿ ಮಾರುಕಟ್ಟೆ ಕಾಯ್ದೆಯು ರೈತರು ತಾವು ಬೆಳೆದ ಬೆಳೆಯನ್ನು ಎಪಿಎಂಸಿ ಮಾರುಕಟ್ಟೆ ಹೊರತಾಗಿಯೂ, ತಮಗಿಷ್ಟ ಬಂದ ಕಡೆ ಮಾರಾಟ ಮಾಡಲು ಅವಕಾಶ ಕಲ್ಪಿಸುತ್ತದೆ.
  • ಜಮೀನಿನಲ್ಲೇ ಅವರು ತಮಗಿಷ್ಟ ಬಂದವರಿಗೆ ಕೃಷಿ ಉತ್ಪನ್ನಗಳನ್ನು ಮಾರಬಹುದು, ವ್ಯಾಪಾರಸ್ಥರು ಖರೀದಿಸಬಹುದು
  • ಇದರಿಂದಾಗಿ ದಲ್ಲಾಳಿಗಳು, ರಾಜ್ಯ ಸರ್ಕಾರಗಳು ಮತ್ತು ಮಾರುಕಟ್ಟೆಗಳು ಕಮಿಷನ್ ಕಳೆದುಕೊಳ್ಳುತ್ತವೆ
  • ಸ್ಪರ್ಧೆಯಿಂದಾಗಿ ರೈತರು ತಮ್ಮ ಬೆಳೆಗೆ ಹೆಚ್ಚು ಬೆಲೆ ಪಡೆಯುತ್ತಾರೆ. ಜೊತೆಗೆ, ಸರಬರಾಜಿನ ಖರ್ಚು ಉಳಿಯುತ್ತದೆ.

ಬೆಲೆ ಭರವಸೆಗಳ ಒಪ್ಪಂದ ಮತ್ತು ಕೃಷಿ ಸೇವೆಗಳ ಕಾಯ್ದೆ

  • ಈ ಕಾಯ್ದೆಯು ರೈತರು ಬೆಳೆದ ಬೆಳೆಗಳ ಮಾರಾಟ ಮಾಡಲು, ಕಂಪನಿಗಳ ಅಥವಾ ಚಿಲ್ಲರೆ ವ್ಯಾಪಾರಿಗಳ ಜತೆ ಒಪ್ಪಂದ ಮಾಡಿಕೊಳ್ಳಲು ಅವಕಾಶ ಕಲ್ಪಿಸುತ್ತದೆ. (ಉದಾ: ಒಬ್ಬ ವ್ಯಕ್ತಿ ಟೊಮೇಟೊ ಬೆಳೆ ಬೆಳೆಯುತ್ತಿದ್ದಾನೆಂದರೆ, ಆತ ಬೆಳೆ ಬರುವುದಕ್ಕೂ ಮುನ್ನವೇ ತಾನು ಬೆಳೆದ ಬೆಳೆಗೆ ಇಷ್ಟು ರೂಪಾಯಿ ಎಂದು ಕಂಪನಿ ಜತೆ ಒಪ್ಪಂದ ಮಾಡಿಕೊಳ್ಳಬಹುದು. ಬೆಳೆ ಬಂದ ನಂತರ ಮಾರುಕಟ್ಟೆಯಲ್ಲಿ ಹೆಚ್ಚು ಅಥವಾ ಕಡಿಮೆ ಬೆಲೆ ಇದ್ದರೂ ಅವರು ಒಪ್ಪಂದ ಮಾಡಿಕೊಂಡ ಬೆಲೆಗೇ ಕಂಪನಿಗೆ ನೀಡಬೇಕಾಗುತ್ತದೆ)
  • ಇದು ಮಾರುಕಟ್ಟೆ ಬೆಲೆಗಳ ‌ಅನಿಶ್ಚಿತತೆಯ ರಿಸ್ಕ್‌ ಅನ್ನು ವರ್ಗಾಯಿಸುವ ಮೂಲಕ ಸಣ್ಣ ಮತ್ತು ಮಧ್ಯಮ ರೈತರಿಗೆ ಅನುಕೂಲ ಮಾಡಿಕೊಡುತ್ತದೆ.

ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ

  • ಅಗತ್ಯ ಸರಕುಗಳ ಪಟ್ಟಿಯಿಂದ ಧಾನ್ಯಗಳು, ಬೇಳೆ ಕಾಳುಗಳು, ಎಣ್ಣೆ ಬೀಜಗಳು, ಖಾದ್ಯ ತೈಲಗಳು, ಈರುಳ್ಳಿ ಮತ್ತು ಆಲೂಗಡ್ಡೆ ಮುಂತಾದ ಸರಕುಗಳನ್ನು ತೆಗೆದುಹಾಕಲು ಈ ಕಾಯ್ದೆ 2020 ಅನುವು ಮಾಡಿಕೊಡುತ್ತದೆ.
  • ಯುದ್ಧ ಮತ್ತು ನೈಸರ್ಗಿಕ ವಿಪತ್ತುಗಳಂತಹ ಅಸಾಧಾರಣ ಸಂದರ್ಭಗಳಲ್ಲಿ ಹೊರತುಪಡಿಸಿ ಅಂತಹ ವಸ್ತುಗಳ ಮೇಲೆ ಸ್ಟಾಕ್-ಹೋಲ್ಡಿಂಗ್ ಮಿತಿ ಹೇರುವುದನ್ನು ಶಾಸನವು ತೆಗೆದುಹಾಕುತ್ತದೆ ಎಂದರ್ಥ.
  • ಈ ಕಾಯ್ದೆಯು ಕೃಷಿ ಕ್ಷೇತ್ರಕ್ಕೆ ಖಾಸಗಿ ವಲಯ ಅಥವಾ ವಿದೇಶಿ ನೇರ ಹೂಡಿಕೆಯನ್ನು ಆಕರ್ಷಿಸುತ್ತದೆ.

ಕೃಷಿ ಕಾಯ್ದೆಗಳನ್ನು ರೈತರು ವಿರೋಧಿಸುತ್ತಿರುವುದೇಕೆ?

  • ಹೊಸ ಕೃಷಿ ಕಾಯ್ದೆಗಳು ಸದ್ಯ ಜಾರಿಯಲ್ಲಿರುವ ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಯನ್ನು ಕಿತ್ತು ಹಾಕುತ್ತವೆ.
  • ಎಲ್ಲಿಯೂ ಸ್ವಾಮಿನಾಥನ್ ವರದಿ ಉಲ್ಲೇಖ ಇಲ್ಲ
  • ಈ ಕಾಯ್ದೆಗಳ ನಿಯಮಾವಳಿಗಳನ್ವಯ ಮುಂದೊಂದು ದಿನ ಕಾರ್ಪೋರೇಟ್ ಕಂಪನಿಗಳು ರೈತರ ಮೇಲೆ ಸರ್ವಾಧಿಕಾರಿಯಾಗುತ್ತವೆ.
  • ರೈತ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುವುದಿಲ್ಲ.
  • ಮಂಡಿ ವ್ಯವಸ್ಥೆಯನ್ನು ವಾಸ್ತವಿಕವಾಗಿ ವಿಸರ್ಜಿಸುವುದರಿಂದ, ತಮ್ಮ ಬೆಳೆಗಳಿಗೆ ಖಚಿತವಾದ ಬೆಲೆ ಸಿಗುವುದಿಲ್ಲ.
  • ಸಾಲ ನೀಡುತ್ತಿರುವ ಕಮಿಷನ್ ಏಜೆಂಟ್‌ಗಳು ಸಹ ಮರೆಯಾಗುತ್ತಾರೆ ಎಂಬುದು ರೈತರ ಆತಂಕವಾಗಿದೆ.

ರೈತರ ಬೇಡಿಕೆಗಳೇನು?

  • ಮೂರು ಕಾಯ್ದೆಗಳು ತಮ್ಮ ಬೆಳೆಗಳ ಮಾರಾಟ ನಿಯಂತ್ರಿಸುವುದರಿಂದ ಮೂರೂ ಕಾಯ್ದೆಗಳನ್ನ ಹಿಂಪಡೆಯಬೇಕು ಎಂಬುದು ಪ್ರಮುಖ ಬೇಡಿಕೆ
  • ವಿದ್ಯುತ್ (ತಿದ್ದುಪಡಿ) ಮಸೂದೆ 2020 ಅನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯ. ಈ ಕಾಯ್ದೆ ರೈತರಿಗೆ ನೀಡುತ್ತಿರುವ ವಿದ್ಯುತ್ ಸಬ್ಸಿಡಿ ಕಸಿಯಬಹುದೆಂಬ ಆತಂಕ

ಸರ್ಕಾರ ಹೇಳೋದೇನು?

  • ಕೃಷಿಯಲ್ಲಿ ಸುಧಾರಣೆ ತರುವಲ್ಲಿ ಈ ಮೂರು ಕೃಷಿ ಕಾಯ್ದೆಗಳು ಪ್ರಮುಖ ಪಾತ್ರ ವಹಿಸಲಿವೆ.
  • ಮಧ್ಯವರ್ತಿಗಳ ಹಾವಳಿಯಿಲ್ಲದೆ ರೈತರು ತಾವು ಬೆಳೆದ ಉತ್ಪನ್ನವನ್ನು ದೇಶದ ಯಾವುದೇ ಭಾಗಗಳಲ್ಲಿ ಮಾರಬಹುದು.
  • ಈ ಹಿಂದೆ ಎಪಿಎಂಸಿಗಳಲ್ಲಿ ಮಾತ್ರ ರೈತರ ಉತ್ಪನ್ನ ಮಾರಾಟ ಮಾಡುವ ವ್ಯವಸ್ಥೆ ಇತ್ತು.
  • ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ ಅಸ್ತಿತ್ವಕ್ಕೆ ಬಂದ ಬಳಿಕ ಎಪಿಎಂಸಿ ಹೊರಗಡೆಯೂ ದೇಶದ ಯಾವುದೇ ಭಾಗದಲ್ಲೂ ಮಾರಾಟ ಮಾಡಲು ಅವಕಾಶ ಸಿಗುತ್ತಿದೆ.

ಇದನ್ನೂ ಓದಿ: LIVE UPDATE: ರೈತರಿಂದ ಭಾರತ್ ಬಂದ್: ಬೆಳ್ಳಂಬೆಳಗ್ಗೆ ರಸ್ತೆಗಿಳಿದ ರೈತ ಸಂಘಟನೆಗಳು

ABOUT THE AUTHOR

...view details