ಮಧುರೈ(ತಮಿಳುನಾಡು):ತಮಿಳುನಾಡಿನಲ್ಲಿ ಪೊಂಗಲ್ ಹಬ್ಬದ ಸಂಭ್ರಮ ಗರಿಗೆದರಿದೆ. ಇಲ್ಲಿನ ಪ್ರಸಿದ್ಧ ಸಾಹಸಮಯ ಸಾಂಪ್ರದಾಯಿಕ ಆಟವಾದ 'ಜಲ್ಲಿಕಟ್ಟು' ಹಲವೆಡೆ ಆರಂಭವಾಗಿದೆ. ಅದರಲ್ಲೂ ಮಧುರೈನ ಅವನಿಯಾಪುರಂನಲ್ಲಿ ನಡೆಯುವ ಜಲ್ಲಿಕಟ್ಟು ಹೆಚ್ಚು ಪ್ರಸಿದ್ಧವಾಗಿದೆ. ಸ್ಪರ್ಧೆ ಆರಂಭವಾಗಿದ್ದು, ಒಂದು ಸಾವಿರ ಗೂಳಿಗಳು ಮತ್ತು ಅವುಗಳನ್ನು ಪಳಗಿಸಲು 600 ಜನರು ಸಜ್ಜಾಗಿದ್ದಾರೆ.
8 ಸುತ್ತುಗಳ ಸ್ಪರ್ಧೆ:ಈ ಸ್ಪರ್ಧೆಯು ಸಂಜೆ 4 ಗಂಟೆಯವರೆಗೆ 8 ಸುತ್ತುಗಳಲ್ಲಿ ನಡೆಯಲಿದೆ. ಪ್ರತಿ ಸುತ್ತಿನಲ್ಲಿ 50ರಿಂದ 75 ಗೂಳಿ ಪಳಗಿಸುವವರು ಭಾಗವಹಿಸಲಿದ್ದಾರೆ. ಹೆಚ್ಚು ಗೂಳಿಗಳನ್ನು ಪಳಗಿಸಿದ ಸಾಹಸಿಗರು ಮುಂದಿನ ಸುತ್ತಿನಲ್ಲಿ ಆಡಲು ಅವಕಾಶ ಪಡೆಯುತ್ತಾರೆ. ಅವನಿಯಪುರಂ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಭಾಗವಹಿಸಿದ 1000 ಹೋರಿಗಳು ಮತ್ತು 600 ಗೂಳಿ ಪಳಗಿಸುವವರನ್ನು ಆಯ್ಕೆ ಮಾಡಲಾಗಿದೆ.
ಮೊದಲ ಬಹುಮಾನ ಕಾರು:ಸ್ಪರ್ಧೆ ಆರಂಭಕ್ಕೂ ಮೊದಲು ಬೆಳಿಗ್ಗೆ ಆಯ್ಕೆಯಾದ ಗೂಳಿಗಳು ಮತ್ತು ಅವುಗಳನ್ನು ಪಳಗಿಸುವ ವ್ಯಕ್ತಿಗಳಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ನಂತರ ಸ್ಪರ್ಧೆಗೆ ಅವಕಾಶ ನೀಡಲಾಯಿತು. ಪ್ರಥಮ ಬಹುಮಾನ ಪಡೆದ ಗೂಳಿಗೆ ಮತ್ತು ಅತಿ ಹೆಚ್ಚು ಹೋರಿಗಳನ್ನು ಹಿಡಿದ ವ್ಯಕ್ತಿಗಳಿಗೆ ಕಾರು ಬಹುಮಾನವಾಗಿ ನೀಡಲಾಗುತ್ತದೆ.
ಹೋರಿ ಹಿಡಿಯುವಾಗ ಗಾಯಗೊಂಡ ವ್ಯಕ್ತಿ ಮತ್ತು ಗೂಳಿಗಳಿಗೆ ತುರ್ತು ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆ ಮತ್ತು ಪಶುವೈದ್ಯಕೀಯ ಇಲಾಖೆ ವತಿಯಿಂದ ವಿಶೇಷ ವೈದ್ಯಕೀಯ ಶಿಬಿರಗಳನ್ನು ಸ್ಫರ್ಧೆ ನಡೆಯುವ ಸ್ಥಳದಲ್ಲಿ ತೆರೆಯಲಾಗಿದೆ. ಆಂಬ್ಯುಲೆನ್ಸ್‌ಗಳನ್ನು ಸಹಿತ ಸನ್ನದ್ಧವಾಗಿ ಇಡಲಾಗಿದೆ. ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಮಧುರೈ ಸರ್ಕಾರಿ ರಾಜಾಜಿ ಆಸ್ಪತ್ರೆಯಲ್ಲಿ ಅಗತ್ಯ ವ್ಯವಸ್ಥೆ ಮಾಡಲಾಗಿದೆ.