ಸೋನ್ಭದ್ರ (ಉ.ಪ್ರ): ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಅಬ್ಬರದ ಮಳೆಯಾಗುತ್ತಿದೆ. ಈ ನಡುವೆ ಬಡವನ ಗುಡಿಸಲ ಮೇಲೆ ಮರ ಉರುಳಿ ಇಡೀ ಕುಟುಂಬ ಬೀದಿಗೆ ಬಂದ ಮನಮಿಡಿಯುವ ಘಟನೆಯೊಂದು ವರದಿಯಾಗಿದೆ. ಭಾರೀ ಮಳೆಯಿಂದಾಗಿ 8 ಮಕ್ಕಳೊಂದಿಗೆ ವಾಸವಿದ್ದ ಮನೆ ಮೇಲೆ ಮರವೊಂದು ಉರುಳಿ ಬಿದ್ದಿದೆ. ಸೋನ್ಭದ್ರ ಜಿಲ್ಲೆಯ ಚೋಪನ್ ನಗರದ 8ನೇ ವಾರ್ಡ್ನಲ್ಲಿ ನಿರಂತರ ಮಳೆ ಸುರಿದ ಪರಿಣಾಮ ಶನಿವಾರ ರಾತ್ರಿ ಗುಡಿಸಲಿನ ಮೇಲೆ ಬೇವಿನ ಮರ ಮುರಿದು ಬಿದ್ದಿತ್ತು.
ಘಟನೆಯಲ್ಲಿ ಒಂದಿಡೀ ಕುಟುಂಬ ಪ್ರಾಣಾಪಾಯದಿಂದ ಪಾರಾಗಿತ್ತು. ಆದರೆ ಗುಡಿಸಲು ಸಂಪೂರ್ಣ ಹಾನಿಯಾಗಿತ್ತು. ನಿರಂತರ ಮಳೆ ಸುರಿಯುತ್ತಿದ್ದ ಕಾರಣ ಬೇರೆಲ್ಲೂ ಜಾಗ ಸಿಗದೆ ಕುಟುಂಬಸ್ಥರು ತಮ್ಮ 8 ಮಕ್ಕಳೊಂದಿಗೆ ಸಾರ್ವಜನಿಕ ಶೌಚಾಲಯದಲ್ಲಿ ಆಸರೆ ಪಡೆದಿದ್ದಾರೆ. ಇದಕ್ಕೂ ಮೊದಲು ಪುರಸಭೆಯ ವತಿಯಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಕುಟುಂಬಕ್ಕೆ ಮನೆ ಮಂಜೂರಾಗಿತ್ತು. ಆದರೆ ಎರಡನೇ ಕಂತು ಪಡೆಯದ ಕಾರಣ ಆ ಕೆಲಸವೂ ಅರ್ಧದಲ್ಲಿಯೇ ನಿಂತಿದೆ. ಹಾಗಾಗಿ ಗುಡಿಸಲಲ್ಲೇ ವಾಸವಿದ್ದ ಕುಟುಂಬಕ್ಕೆ ಮಳೆ ಶತ್ರುವಾಗಿ ಕಾಡಿದ್ದು, ನೆಲೆಗಾಗಿ ಶೌಚಾಲಯವನ್ನೇ ನಂಬಿಕೊಂಡಿದ್ದಾರೆ.