ಬಟಿಂಡಾ (ಪಂಜಾಬ್):ಬಾದಲ್ ಕುಟುಂಬದ ಎಲ್ಲ ಸದಸ್ಯರು, ಎಸ್‌ಎಡಿ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಶುಕ್ರವಾರ ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರ ಚಿತಾಭಸ್ಮ ಸಂಗ್ರಹಿಸಿದರು. ರಾಜ್ಯ ರಾಜಕೀಯದ ಹಿರಿಯ ನಾಯಕ ಪ್ರಕಾಶ್ ಸಿಂಗ್ ಬಾದಲ್ ಮಂಗಳವಾರ ಮೊಹಾಲಿಯ ಆಸ್ಪತ್ರೆಯಲ್ಲಿ ನಿಧನರಾದರು. ಪ್ರಕಾಶ್ ಸಿಂಗ್ ಬಾದಲ್ ಅವರ ಅಂತ್ಯಕ್ರಿಯೆ ಗುರುವಾರ ನಡೆಯಿತು.
ಬಾದಲ್ ಅವರ ಪುತ್ರ ಸುಖ್ಬೀರ್ ಸಿಂಗ್ ಬಾದಲ್, ಅವರ ಪುತ್ರಿಯರಾದ ಹರ್ಕಿರತ್ ಕೌರ್, ಗುರ್ಲೀನ್ ಕೌರ್ ಮತ್ತು ಮಗ ಅನಂತವೀರ್, ಮಗಳು ಪರ್ನೀತ್ ಕೌರ್, ಅವರ ಪತಿ ಆದೀಶ್ ಪರತಾಪ್ ಸಿಂಗ್ ಕೈರೋನ್ ಮತ್ತು ಮಗ ಜೈ ಹಾಗೂ ಸೋದರಳಿಯ ಮನ್‌ಪ್ರೀತ್ ಬಾದಲ್, ಅವರ ಮಗ ಅರ್ಜುನ್ ಮತ್ತು ಮಗಳು ರಿಯಾ ಅವರು ಚಿತಾಭಸ್ಮ ಸಂಗ್ರಹಿಸುವ ಕಾರ್ಯದಲ್ಲಿ ನಿರತರಾಗಿದ್ದರು.
ಧಾರ್ಮಿಕ ವಿಧಿ ವಿಧಾನ:ಜೊತೆಗೆ ಬಾದಲ್ ಅವರ ವೈಯಕ್ತಿಕ ಸಿಬ್ಬಂದಿ ಕೂಡ ಧಾರ್ಮಿಕ ವಿಧಿಗಳಲ್ಲಿ ಪಾಲ್ಗೊಂಡಿದ್ದರು. ಸುಖಬೀರ್ ಅವರ ಪತ್ನಿ ಹರ್ಸಿಮ್ರತ್ ಕೌರ್ ಬಾದಲ್, ಮನ್‌ಪ್ರೀತ್ ಅವರ ಪತ್ನಿ ವಿನು ಬಾದಲ್, ಬಿಕ್ರಮ್ ಸಿಂಗ್ ಮಜಿಥಿಯಾ, ಮೇಜರ್ ಭೂಪಿಂದರ್ ಸಿಂಗ್ ಧಿಲ್ಲೋನ್, ಮಹೇಶಿಂದರ್ ಸಿಂಗ್ ಬಾದಲ್, ಮಾಜಿ ಶಾಸಕ ಜಗದೀಪ್ ಸಿಂಗ್ ನಕೈ, ಮಾಜಿ ಶಾಸಕ ಗುರ್ತೇಜ್ ಸಿಂಗ್ ಘುರಿಯಾನಾ, ವಿಜೇತ ಜಿತ್ ಸಿಂಗ್ ಗೋಲ್ಡಿ, ಜಗಜಿತ್ ಸಿಂಗ್ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು. ಫಟ್ಟನ್ವಾಲಾ ಮತ್ತು ಅನೇಕ ಸಿಖ್ ಪುರೋಹಿತರು ಕೂಡಾ ಇದ್ದರು.
ಬಾದಲ್ ಅವರ 'ಭೋಗ್' ಕಾರ್ಯಕ್ರಮ ಮೇ 4:ಪ್ರಕಾಶ್ ಸಿಂಗ್ ಬಾದಲ್ ಅವರ ಆತ್ಮಕ್ಕೆ ಶಾಂತಿ ಕೋರಲು ''ಅರ್ದಾಸ್'' ಅನ್ನು ಅಕಲ್ ತಖ್ತ್ ಸಾಹಿಬ್‌ನ ಮಾಜಿ ಮುಖ್ಯಸ್ಥ ಗಿಯಾನಿ ಗುರ್ಬಚನ್ ಸಿಂಗ್ ಅವರು ನಡೆಸಿ ಕೊಟ್ಟರು. ಶಿರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿ (SGPC) ಮುಖ್ಯಸ್ಥ ಹರ್ಜಿಂದರ್ ಸಿಂಗ್ ಧಾಮಿ ಮತ್ತು ದಮ್ದಾಮಿ ತಕ್ಸಲ್ ಮುಖ್ಯಸ್ಥ ಹರ್ನಾಮ್ ಸಿಂಗ್ ಧುಮ್ಮಾ ಸಹ ಉಪಸ್ಥಿತರಿದ್ದರು. ಬಾದಲ್ ಅವರ 'ಭೋಗ್' (ಕೊನೆಯ ಪ್ರಾರ್ಥನೆ) ಕಾರ್ಯಕ್ರಮ ಮೇ 4 ರಂದು ಬಾದಲ್ ಗ್ರಾಮದಲ್ಲಿ ನಡೆಯಲಿದೆ.
ಪ್ರಕಾಶ್ ಸಿಂಗ್ ಬಾದಲ್ ರಾಜಕೀಯ ಪ್ರವೇಶ: 1947ರಲ್ಲಿ ರಾಜಕೀಯಕ್ಕೆ ಪದಾರ್ಪಣೆ ಮಾಡಿದ ಪ್ರಕಾಶ್ ಸಿಂಗ್ ಬಾದಲ್ 1957ರಲ್ಲಿ ಮೊದಲ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು 1969ರಲ್ಲಿ ಪ್ರಕಾಶ್ ಸಿಂಗ್ ಬಾದಲ್ ಮತ್ತೆ ಶಾಸಕರಾಗಿದ್ದರು. 1970-71, 1977-80, 1997-2002ರಲ್ಲಿ ಪ್ರಕಾಶ್ ಸಿಂಗ್ ಬಾದಲ್ ಪಂಜಾಬ್ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. ಇದರೊಂದಿಗೆ ಅವರು 1972, 1980 ಮತ್ತು 2002 ರಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು. ಪ್ರಕಾಶ್ ಸಿಂಗ್ ಬಾದಲ್ ಅವರು ಸಂಸತ್ತಿನ ಸದಸ್ಯರಾಗಿ ಮತ್ತು ಕೇಂದ್ರದಲ್ಲಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. 1 ಮಾರ್ಚ್ 2007 ರಿಂದ 2017 ರವರೆಗೆ ಎರಡು ಬಾರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.
ಇದನ್ನೂ ಓದಿ:ಕುಸ್ತಿ ಫೆಡರೇಷನ್ ಮುಖ್ಯಸ್ಥರ ಲೈಂಗಿಕ ಕಿರುಕುಳ ಆರೋಪ: ಇಂದೇ ಎಫ್‌ಐಆರ್ ದಾಖಲು.. ಸುಪ್ರೀಂಗೆ ಪೊಲೀಸರ ಹೇಳಿಕೆ