ಹೋಶಿಯಾರ್‌ಪುರ: ಪಂಜಾಬ್‌ನ ಬಹುತೇಕ ಯುವಕರು ವಿದೇಶಕ್ಕೆ ಹೋಗುವ ಕನಸು ಕಾಣುತ್ತಾರೆ. ಹೆಚ್ಚಿನ ಯುವಕರು ಜೀವನೋಪಾಯಕ್ಕಾಗಿ ಮತ್ತು ತಮ್ಮ ಕುಟುಂಬದ ಆರ್ಥಿಕ ಸ್ಥಿತಿ ಸುಧಾರಿಸಲು ವಿದೇಶಕ್ಕೆ ಹೋಗುತ್ತಾರೆ. ಆದರೆ, ವಿದೇಶಕ್ಕೆ ಹೋಗಿ ಜೀವನ ಸಾಗಿಸುವ ಕನಸು ನನಸಾಗಿರುವುದು ಮಾತ್ರ ಬೆರಳೆಣಿಕೆಯಷ್ಟು ಮಾತ್ರ. ಈ ರೀತಿ ಜೀವನೋಪಾಯಕ್ಕಾಗಿ ದುಬೈಗೆ ಹೋಗಿ ಸಿಕ್ಕಿಬಿದ್ದ ಯುವಕನಿಗಾಗಿ ಗರ್ಶಂಕರ್ನ ಕುಟುಂಬವೊಂದು ಸಹಾಯ ಕೋರಿರುವ ಪ್ರಕರಣ ಬೆಳಕಿಗೆ ಬಂದಿದೆ.
ಮಾಹಿತಿ ಪ್ರಕಾರ ಗರ್ಶಂಕರದ ಮಹಿಗ್ರೋವಲ್ ಗ್ರಾಮದ ಯುವಕನೊಬ್ಬ ನಾಲ್ಕು ವರ್ಷಗಳ ಹಿಂದೆ ಜೀವನೋಪಾಯಕ್ಕಾಗಿ ದುಡಿಯಲು ದುಬೈಗೆ ಹೋಗಿದ್ದ. ಆದರೆ, ಅಲ್ಲಿ ನಡೆದ ಅಪಘಾತದಿಂದಾಗಿ ಆ ಯುವಕ ಜೈಲಿನಲ್ಲಿ ಸೆರೆಯಾಗಿದ್ದಾನೆ. ಜೈಲಿನಿಂದ ಹೊರ ಬರಬೇಕಾದರೆ ಯುವಕನಿಗೆ ವಿಧಿಸಿರುವ ದಂಡವನ್ನು ಕಟ್ಟಬೇಕಾಗಿದೆ. ಆದರೆ, ಆ ದಂಡವನ್ನು ಕಟ್ಟುವ ಸಾಮರ್ಥ್ಯ ಆತನಲ್ಲಿಲ್ಲ. ಈಗ ಯುವಕನನ್ನು ಜೈಲಿನಿಂದ ಬಿಡಿಸಿ ಕರೆದುಕೊಂಡು ಬರಲು ಕುಟುಂಬಸ್ಥರು ನೆರವಿನ ಸೆರಗೊಡ್ಡಿದ್ದಾರೆ.