ಎರ್ನಾಕುಲಂ (ಕೇರಳ) : ಜಿಲ್ಲೆಯ ಪೆರುಂಬವೂರು ಚೆಲಮಟ್ಟಂನಲ್ಲಿ ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಶವವಾಗಿ ಪತ್ತೆಯಾಗಿದ್ದಾರೆ.
ಬಿಜು (46) ಪತ್ನಿ ಅಂಬಿಲಿ (39) ಮಕ್ಕಳಾದ ಆದಿತ್ಯನ್ (15) ಮತ್ತು ಅರ್ಜುನ್ (13) ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮಕ್ಕಳ ಮೃತ ದೇಹ ಮನೆಯ ಹಾಲ್ನಲ್ಲಿ ಪತ್ತೆಯಾದರೆ, ದಂಪತಿಯ ಮೃತದೇಹ ಮಲಗುವ ಕೋಣೆಯಲ್ಲಿ ಪತ್ತೆಯಾಗಿದೆ.
ಸಾಲ ಬಾಧೆಯಿಂದ ಬೇಸತ್ತು ದಂಪತಿ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪ್ರಾಥಮಿಕ ತನಿಖೆ ಬಳಿಕ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮನೆಯಲ್ಲಿ ಡೆತ್ ನೋಟ್ ಕೂಡ ಪತ್ತೆಯಾಗಿದೆ. ಮನೆಯೊಳಗಿನ ಗೋಡೆಗಳ ಮೇಲೆ, ‘ಆತ್ಮಗಳು ಶಾಂತಿಯಿಂದ ವಿಶ್ರಾಂತಿ ಪಡೆಯುವುದಿಲ್ಲವಾದ್ದರಿಂದ ಸಂಬಂಧಿಕರನ್ನು ಮನೆಯೊಳಗೆ ಬಿಡಬೇಡಿ’ ಎಂದು ಬರೆಯಲಾಗಿದೆ.
ಓದಿ : ಅನಧಿಕೃತ ವಿದ್ಯುತ್ ಸಂಪರ್ಕ; ಆರೋಪಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿದ ಬೆಳಗಾವಿ ಕೋರ್ಟ್
ಚಿಟ್ ಫಂಡ್ ವ್ಯವಹಾರ ನಡೆಸಿದ್ದ ದಂಪತಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು, ಹಣ ಪಡೆದವರಿಗೆ ಡಿ.31 ರಂದು ವಾಪಸ್ ನೀಡುವುದಾಗಿ ತಿಳಿಸಿದ್ದರು ಎಂದು ಹೇಳಲಾಗ್ತಿದೆ. ಹಣ ನೀಡಿದವರು ಮತ್ತು ಪಡೆದವರ ಸಂಪೂರ್ಣ ವಿವರಗಳನ್ನು ಮನೆಯಲ್ಲಿ ಪತ್ತೆಯಾದ ಡೈರಿಯಲ್ಲಿ ಬಿಜು ಬರೆದಿದ್ದಾರೆ. ಹಣ ನೀಡಿದವರಿಗೆ ವಾಪಸ್ ಪಡೆದುಕೊಳ್ಳಲು ಡಿ.31 ರಂದು ( ಇಂದು) ಬೆಳಗ್ಗೆ ಮನೆಗೆ ಬರುವಂತೆ ಬಿಜು ಕರೆ ಮಾಡಿ ತಿಳಿಸಿದ್ದರು ಎನ್ನಲಾಗ್ತಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಾಮೂಹಿಕ ಆತ್ಮಹತ್ಯೆಗೆ ಬೇರೆ ಯಾವುದೇ ಕಾರಣಗಳಿರಬಹುದು ಎಂಬುವುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಮೃತ ದೇಹಗಳನ್ನು ಕಲಾಮಶ್ಶೇರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಸಾಗಿಸಲಾಗಿದೆ.