ಶಿಮ್ಲಾ:ರಾಜಕೀಯದಲ್ಲಿ ಶತ್ರುಗಳು, ಮಿತ್ರರು ಮತ್ತು ಸಂಬಂಧಿಕರು ಎಂಬುದಿಲ್ಲ. ಇಲ್ಲಿ ಅಧಿಕಾರಕ್ಕಾಗಿ ಯಾರು ಯಾರ ವಿರುದ್ಧ ಬೇಕಾದರೂ ಸ್ಪರ್ಧಿಸಬೇಕಾಗುತ್ತದೆ. ಹಾಗೆಯೇ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲೂ ಕೆಲವೆಡೆ ಸಂಬಂಧಿಕರ ಮಧ್ಯೆಯೇ ನೇರ ಸ್ಪರ್ಧೆ ಏರ್ಪಟ್ಟಿತ್ತು.
ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕುಟುಂಬದ ಸದಸ್ಯರು ಪರಸ್ಪರ ಸ್ಪರ್ಧಿಸಿರುವುದು ಒಂದು ಕಡೆಯಾದ್ರೆ, ಸಂಬಂಧಿಕರಿಂದಾಗೇ ಟಿಕೆಟ್ ಕೈ ತಪ್ಪಿದ್ದು ಇನ್ನೊಂದು ಕಡೆ. ಬಿಜೆಪಿ ಕುಲುವಿನಿಂದ ಮಾಜಿ ಶಾಸಕ ಮತ್ತು ಸಂಸದ ಮಹೇಶ್ವರ್ ಸಿಂಗ್ ಅವರಿಗೆ ಟಿಕೆಟ್ ಘೋಷಣೆಯಾಗಿತ್ತು. ಆದರೆ, ಅವರ ಮಗ ಹಿತೇಶ್ವರ್ ಸಿಂಗ್ ಅವರು ಬಂಜಾರ್ನಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಇದರಿಂದಾಗಿ ಮಹೇಶ್ವರ್ ಸಿಂಗ್ ಅವರಿಗೆ ಕುಲು ಕ್ಷೇತ್ರದ ಟಿಕೆಟ್ ಅನ್ನು ಬಿಜೆಪಿ ರದ್ದುಗೊಳಿಸಿತ್ತು.
ಮಾವ - ಅಳಿಯನ ಮಧ್ಯೆ ಫೈಟ್: ಸೋಲನ್ ಕ್ಷೇತ್ರದಲ್ಲಿ ಮಾವ ಮತ್ತು ಅಳಿಯ ಪರಸ್ಪರರ ವಿರುದ್ಧ ಕಣಕ್ಕಿಳಿದಿದ್ದರು. ಮಾವ ಡಾ. ಧನಿ ರಾಮ್ ಶಾಂಡಿಲ್ (ಕಾಂಗ್ರೆಸ್) ಮತ್ತು ಅಳಿಯ ಡಾ. ರಾಜೇಶ್ ಕಶ್ಯಪ್ (ಬಿಜೆಪಿ) ಪರಸ್ಪರ ಸ್ಪರ್ಧಿಸಿದ್ದರು. 2017 ರಲ್ಲೂ ಇವರು ಕಣದಲ್ಲಿದ್ದರು. ಆಗ ಮಾವ ಶಾಂಡಿಲ್ ಜಯ ಸಾಧಿಸಿದ್ದರು. ಈ ಬಾರಿ ಕೂಡ ಮಾವನೇ ಮೇಲುಗೈ ಸಾಧಿಸಿದ್ದಾರೆ. ಮಾವ ಶಾಂಡಿಲ್ 29,523 ಮತ್ತು ಅಳಿಯ ಕಶ್ಯಪ್ 25,887 ಮತ ಪಡೆದಿದ್ದಾರೆ.
ಉನಾದ ಕುಟ್ಲೆಹಾರ್‌ನಲ್ಲಿ ಬಿಜೆಪಿ ಅಭ್ಯರ್ಥಿ ವೀರೇಂದ್ರ ಕನ್ವರ್ ಅವರು ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ತಮ್ಮ ಸೋದರಳಿಯ ದೇವೇಂದ್ರ ಭುಟ್ಟೊ ವಿರುದ್ಧ ಸ್ಪರ್ಧಿಸಿದ್ದರು. ಇದರಲ್ಲಿ ದೇವೇಂದ್ರ ಭುಟ್ಟೊ 35,956 ಮತ ಪಡೆದು ಮಾವ ವೀರೇಂದ್ರ ಕನ್ವರ್ (28,503 ಮತ) ಅವರನ್ನು ಸೋಲಿಸಿದರು.
ಚಿಕ್ಕಪ್ಪನ ಸೋಲಿಸಿ ಮಗ:ಭರ್ಮೂರ್ ವಿಧಾನಸಭೆಯಲ್ಲಿ ಚಿಕ್ಕಪ್ಪ-ಮಗ (ಅಣ್ಣನ ಮಗ) ಚುನಾವಣಾ ಸಮರದಲ್ಲಿದ್ದರು. ಕಾಂಗ್ರೆಸ್ ಅಭ್ಯರ್ಥಿ ಮತ್ತು ಮಾಜಿ ಸಚಿವ ಠಾಕೂರ್ ಸಿಂಗ್ ಭರ್ಮೌರಿ ವಿರುದ್ಧ ಇತ್ತೀಚೆಗೆ ರಾಜಕೀಯಕ್ಕೆ ಧುಮುಕಿದ್ದ ಅವರ ಅಣ್ಣನ ಮಗ ಬಿಜೆಪಿ ಅಭ್ಯರ್ಥಿ ಡಾ.ಜನಕರಾಜ್ ಸ್ಪರ್ಧಿಸಿದ್ದರು. ಆದರೆ ರಾಜಕೀಯ ಅನುಭವ ಇದ್ದ ಚಿಕ್ಕಪ್ಪ ಠಾಕೂರ್ ಸಿಂಗ್ (24,845) ನನ್ನು ಜನಕರಾಜ್ 29,957 ಮತ ಪಡೆದು ಸೋಲಿಸಿದ್ದಾರೆ.