ಜೈಪುರ(ರಾಜಸ್ಥಾನ):ಮನೆಯಲ್ಲಿನ ಕೌಟುಂಬಿಕ ಕಲಹದಿಂದಾಗಿ ತಾಯಿಯೋರ್ವಳು ನಾಲ್ವರು ಮಕ್ಕಳನ್ನ ಬಾವಿಗೆ ತಳ್ಳಿ, ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ರಾಜಸ್ಥಾನದ ಅಜ್ಮೇರ್ ಜಿಲ್ಲೆಯ ಮಂಗಳಿಯವಾಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ನಾಲ್ವರು ಪುಟ್ಟ ಮಕ್ಕಳು ಸಾವಿಗೀಡಾಗಿದ್ದಾರೆ. ಮಹಿಳೆಯ ಪತಿ ಈ ವೇಳೆ ಕೃಷಿ ಕೆಲಸ ಮಾಡ್ತಿದ್ದ ಎಂದು ತಿಳಿದುಬಂದಿದೆ.
ಕೌಟುಂಬಿಕ ಕಲಹದಿಂದಾಗಿ 32 ವರ್ಷದ ಮೋತಿದೇವಿ ಮನನೊಂದು ತನ್ನ ನಾಲ್ವರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆಂದು ಪೊಲೀಸರು ಮಾಹಿತಿ ನೀಡಿದ್ದಾರೆ. ನಿನ್ನೆ ತಡರಾತ್ರಿ ಈ ಘಟನೆ ನಡೆದಿದೆ. ದುರ್ಘಟನೆಯಲ್ಲಿ ಕೋಮಲ್ (4 ವರ್ಷ), ರಿಂಕು (3 ವರ್ಷ), ರಾಜ್‍ವೀರ್ (22 ತಿಂಗಳು) ಮತ್ತು ದೇವರಾಜ್ (ಒಂದು ತಿಂಗಳು) ಮೃತಪಟ್ಟವರು. ಆದರೆ, ಮಹಿಳೆ ಮಾತ್ರ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಾಹಿತಿ ಗೊತ್ತಾಗುತ್ತಿದ್ದಂತೆ ಘಟನಾ ಸ್ಥಳಕ್ಕೆ ಪೊಲೀಸ್, ಎಸ್ಡಿಆರ್ಎಫ್ ಸಿಬ್ಬಂದಿ ದೌಡಾಯಿಸಿ ನಾಲ್ವರು ಮಕ್ಕಳ ಮೃತದೇಹವನ್ನು ಬಾವಿಯಿಂದ ಹೊರತೆಗೆದಿದ್ದಾರೆ.