ಬರ್ನಾಲಾ (ಪಂಜಾಬ್):ಜನವರಿ 26ರ ದೆಹಲಿ ಹಿಂಸಾಚಾರದಲ್ಲಿ ಹಲವು ರೈತರು ಗಾಯಗೊಂಡಿದ್ದರು. ಈ ಘಟನೆಯಲ್ಲಿ ತಲೆಗೆ ತೀವ್ರ ಪೆಟ್ಟು ಬಿದ್ದು ರಕ್ತಸಿಕ್ತ ಯುವಕನ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಹರಡಿದ ತಲೆಕೂದಲೂ, ಉದ್ದನೆಯ ಗಡ್ಡ ಬಿಟ್ಟಿದ್ದ ಯುವಕನ ತಲೆಯಿಂದ ರಕ್ತ ಸುರಿಯುತ್ತಿತ್ತು ಆದರೂ ಆ ಯುವಕ ಪ್ರತಿಭಟಿಸುತ್ತಲೇ ಇದ್ದ.
ಸದ್ಯ ಆ ವ್ಯಕ್ತಿ ಯಾರು ಎಂದು ಜನತೆ ಹುಡುಕಾಡಿದ್ದಾರೆ. ಆತ ಪಂಜಾಬ್ ಪ್ರ್ಯಾಂತ್ಯದ ಬರ್ನಾಲಾದ ಪಾಂಡೇರ್ ಗ್ರಾಮದ ಬಾಬಾ ಜಗ್ಗಿ ಸಿಂಗ್. ಈತ ರೈತರ ಪ್ರತಿಭಟನೆಯಲ್ಲಿ ಮೊದಲ ದಿನದಿಂದಲೇ ಬೀದಿಗಿಳಿದು ಪ್ರತಿಭಟಿಸಿದ್ದಾನೆ.
ಇದೀಗ ಪಂಜಾಬ್ನಲ್ಲಿ ಜಗ್ಗಿ ಸಿಂಗ್ ಫುಲ್ ಫೇಮಸ್ ಆಗಿದ್ದು, ಆತನ ಮನೆ ಬಳಿ ಜನ ಸೇರುತ್ತಿದ್ದಾರೆ.
ಟ್ರ್ಯಾಕ್ಟರ್ ಪರೇಡ್ನ ವೇಳೆ ಜಗ್ಗಿ ತಲೆಗೆ ಗಾಯವಾಗಿತ್ತು. ಬಳಿಕ ತಲೆ ಮೇಲಿನ ಟರ್ಬನ್ ತೆಗೆದು ರಕ್ತವನ್ನು ಅದರಿಂದ ಒರೆಸಿಕೊಳ್ಳುತ್ತಾ ಪೊಲೀಸರ ಲಾಠಿ ಏಟು ಎದುರಿಸಿದ್ದ. ಈತನ ಧೈರ್ಯಕ್ಕೆ ಪಂಜಾಬ್ ಮಾತ್ರವಲ್ಲ ದೇಶದಲ್ಲೇ ಆತ ಪ್ರಸಿದ್ಧಿ ಪಡೆದಿದ್ದ. ಇದೀಗ ಆತನ ಗ್ರಾಮ ಹಾಗೂ ಕುಟುಂಬಸ್ಥರು ಆತನ ಬಗ್ಗೆ ಹೆಮ್ಮೆ ಪಡುತ್ತಿದ್ದಾರೆ.
ಈ ಕುರಿತು ಬಾಬಾ ಜಗ್ಗಿ ಸಿಂಗ್ ತಾಯಿ ಮಾಧ್ಯಮದೊಂದಿಗೆ ಮಾತನಾಡುತ್ತಾ ಹರ್ಷ ವ್ಯಕ್ತಪಡಿಸಿದ್ದಾರೆ. ನನ್ನ ಮಗ ರೈತ ಪ್ರತಿಭಟನೆಯ ಮೊದಲ ದಿನದಂದಲೇ ಜೊತೆಗಿದ್ದಾನೆ. ಆದರೆ ಪೊಲೀಸರು ಅವನ ಮೇಲೆ ಹಲ್ಲೆ ಮಾಡಿದ್ದನ್ನು ಮಾಧ್ಯಮಗಳಲ್ಲಿ ನಾನು ನೋಡಿದೆ. ಆದರೆ, ನನ್ನ ಮಗ ರೈತರ ಪರವಾಗಿ ಧ್ವನಿ ಎತ್ತಿದ್ದಾನೆ ಎಂದು ಹೆಮ್ಮೆಯಾಗುತ್ತದೆ. ಪೊಲೀಸರು ಥಳಿಸಿದ್ದರಿಂದ ನೋವಾಗಿದೆ ಎಂದಿದ್ದಾರೆ.
ಗಡಿಯಲ್ಲಿ ಗಲಾಟೆ ವೇಳೆ ಜಗ್ಗಿ ತಲೆಗೆ ಬಲವಾದ ಹೊಡೆತ ಬಿದ್ದಿತ್ತು. ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ತಲೆಗೆ 5 ಹೊಲಿಗೆ ಹಾಕಲಾಗಿತ್ತು.
ಇದನ್ನೂ ಓದಿ:ರಿಪಬ್ಲಿಕ್ ಡೇ ಹಿಂಸಾಚಾರದ ಬಗ್ಗೆ ನ್ಯಾಯಾಂಗ ತನಿಖೆ ಕೋರಿ ಪಿಐಎಲ್: ನಾಳೆ ವಿಚಾರಣೆ