ನವದೆಹಲಿ:ಪತಿಯ ಕುಟುಂಬದ ಸದಸ್ಯರ ವಿರುದ್ಧ ಮಹಿಳೆಯೊಬ್ಬರು ವರದಕ್ಷಿಣೆ ಕಿರುಕುಳ ಅಥವಾ ಅತ್ಯಾಚಾರದ ಸುಳ್ಳು ಆರೋಪಗಳನ್ನು ಮಾಡಿದ್ದು ಅತ್ಯಂತ ಕ್ರೌರ್ಯವಾಗಿದೆ. ಇದನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ. ಅಲ್ಲದೆ, ಯಾವುದೇ ವೈವಾಹಿಕ ಸಂಬಂಧದ ತಳಹದಿಯು ಸಹಬಾಳ್ವೆ ದಾಂಪತ್ಯ ಸಂಬಂಧವಾಗಿದೆ ಎಂದು ತಿಳಿಸಿದೆ.
ಮಾನಸಿಕ ಕ್ರೌರ್ಯದ ನಿದರ್ಶನ:ಈ ಕ್ರೌರ್ಯದ ಆಧಾರದ ಮೇಲೆ ತನ್ನ ಪತಿ ಪರವಾಗಿ ವಿಚ್ಛೇದನದ ತೀರ್ಪು ನೀಡುವ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ, ಮಹಿಳೆ ಮೇಲ್ಮನವಿ ಸಲ್ಲಿಸಿದ್ದಳು. ಈ ಅರ್ಜಿಯನ್ನು ವಜಾಗೊಳಿಸುವ ಸಂದರ್ಭದಲ್ಲಿ ನ್ಯಾಯಾಲಯ ಈ ರೀತಿಯಾಗಿ ಹೇಳಿದೆ. ಪ್ರಸ್ತುತ ಈ ದಂಪತಿ 2014ರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಇದು ಅವರು ವೈವಾಹಿಕ ಸಂಬಂಧವನ್ನು ಉಳಿಸಿಕೊಳ್ಳಲು ಅಸಮರ್ಥರಾಗಿದ್ದಾರೆ. ಪರಸ್ಪರ ಒಡನಾಟ ಮತ್ತು ವೈವಾಹಿಕ ಸಂಬಂಧದಿಂದ ಪರಸ್ಪರ ವಂಚಿತರಾಗಿದ್ದಾರೆ ಎಂಬುದನ್ನು ಸಾಬೀತುಪಡಿಸುತ್ತದೆ. ಸುಮಾರು ಒಂಬತ್ತು ವರ್ಷಗಳ ಕಾಲ ಇಂತಹ ಪ್ರತ್ಯೇಕತೆಯು ಅತ್ಯಂತ ಮಾನಸಿಕ ಕ್ರೌರ್ಯದ ನಿದರ್ಶನವಾಗಿದೆ. ಹಿಂದೂ ವಿವಾಹ ಕಾಯ್ದೆಯಡಿಯಲ್ಲಿ ಕ್ರೌರ್ಯದ ಆಧಾರದ ಮೇಲೆ ವೈವಾಹಿಕ ಸಂಬಂಧ ಕಡಿದುಕೊಂಡಿದೆ ಎಂದು ನ್ಯಾಯಮೂರ್ತಿಗಳಾದ ಸುರೇಶ್ ಕುಮಾರ್ ಕೈಟ್ ಮತ್ತು ನೀನಾ ಬನ್ಸಾಲ್ ಕೃಷ್ಣ ಅವರ ಪೀಠ ಹೇಳಿದೆ.
ಈ ಕ್ರೌರ್ಯದ ಕೃತ್ಯಕ್ಕೆ ಯಾವುದೇ ಕ್ಷಮೆಯಿಲ್ಲ- ಹೈಕೋರ್ಟ್:ಪತಿ ವಿರುದ್ಧ ಪತ್ನಿ ಸಲ್ಲಿಸಿರುವ ಸುಳ್ಳು ದೂರುಗಳು ಪುರುಷನ ವಿರುದ್ಧ ಮಾನಸಿಕ ಕ್ರೌರ್ಯವನ್ನು ರೂಪಿಸುತ್ತವೆ ಎಂದು ಪೀಠ ಹೇಳಿದೆ. ವರದಕ್ಷಿಣೆ ಕಿರುಕುಳ ಮಾತ್ರವಲ್ಲದೇ ಪ್ರತಿವಾದಿಯ (ಗಂಡನ) ಕುಟುಂಬದ ಸದಸ್ಯರ ವಿರುದ್ಧ ಅತ್ಯಾಚಾರದ ಗಂಭೀರ ಆರೋಪಗಳು ಸುಳ್ಳು ಎಂದು ಸಾಬೀತಾಗಿರುವುದು ಅತ್ಯಂತ ಕ್ರೌರ್ಯದ ಕೃತ್ಯವಾಗಿದ್ದು, ಇದಕ್ಕೆ ಯಾವುದೇ ಕ್ಷಮೆ ಇಲ್ಲ ಎಂದು ಹೈಕೋರ್ಟ್ ಹೇಳಿದೆ.