ಗ್ವಾಲಿಯರ್(ಮಧ್ಯಪ್ರದೇಶ):ಸುಳ್ಳು ಅತ್ಯಾಚಾರ ಆರೋಪ ಮಾಡಿ, ಪೋಕ್ಸೋ ಕಾಯ್ದೆಯಡಿ ಯುವಕನ ಬಂಧನ ಮತ್ತು ಕಾನೂನು ದುರ್ಬಳಕೆ ಮಾಡಿಕೊಂಡ ಗರ್ಭಪಾತ ಮಾಡಿಸಿಕೊಂಡಿದ್ದ ಯುವತಿ, ಆಕೆಯ ತಂದೆ ಮತ್ತು ಸಹೋದರನಿಗೆ ಮಧ್ಯಪ್ರದೇಶದ ಗ್ವಾಲಿಯರ್ ಹೈಕೋರ್ಟ್ 6 ತಿಂಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ. ಪೊಲೀಸರು, ಹೈಕೋರ್ಟ್ ಕಣ್ಣಿಗೆ ಮಣ್ಣೆರಚಿದ ಈ ಕೇಸ್ ಮಧ್ಯಪ್ರದೇಶದಲ್ಲಿ ಭಾರಿ ಸದ್ದು ಮಾಡಿದೆ.
ಪ್ರಕರಣವೇನು?:2021 ರ ಮಾರ್ಚ್ನಲ್ಲಿ ಗ್ವಾಲಿಯರ್ನ ದಾತಿಯಾದಲ್ಲಿ ಅತ್ಯಾಚಾರ ಕೇಸ್ ದಾಖಲಾಗಿತ್ತು. ತನ್ನ ಮಗಳನ್ನು ಯುವಕನೊಬ್ಬ ಅತ್ಯಾಚಾರ ಮಾಡಿ ಆಕೆ ಗರ್ಭಿಣಿಯಾಗಲು ಕಾರಣನಾಗಿದ್ದಾನೆ. ಆಕೆ ಅಪ್ರಾಪ್ತೆಯಾಗಿದ್ದು ಭವಿಷ್ಯದ ದೃಷ್ಟಿಯಿಂದ ಗರ್ಭಪಾತಕ್ಕೆ ಅವಕಾಶ ನೀಡಬೇಕು ಎಂದು ಕೋರಿ ವ್ಯಕ್ತಿಯೊಬ್ಬರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ವ್ಯಕ್ತಿ ನೀಡಿದ ದೂರಿನ ಮೇಲೆ ಸೋನು ಎಂಬ ಯುವಕನನ್ನು ಪೋಕ್ಸೋ ಕಾಯ್ದೆಯಡಿ ಪೊಲೀಸರು ಬಂಧಿಸಿದ್ದರು. ಬಳಿಕ ವಿಚಾರಣೆಯಲ್ಲಿ ಹೈಕೋರ್ಟ್, ಅಪ್ರಾಪ್ತ ಬಾಲಕಿ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಗರ್ಭಪಾತಕ್ಕೆ ಅನುಮತಿ ನೀಡಿತ್ತು.
ಗರ್ಭಪಾತ ಬಳಿಕ ಉಲ್ಟಾ ಹೊಡೆದ ಕೇಸ್:ನ್ಯಾಯಾಲಯದ ಆದೇಶದ ಮೇರೆಗೆ ಬಾಲಕಿಗೆ ಗರ್ಭಪಾತ ಮಾಡಿಸಲಾಗಿದೆ. ಬಳಿಕ ಪ್ರಕರಣ ತಿರುವು ಪಡೆದುಕೊಂಡಿದ್ದು, ಕೇಸ್ನಲ್ಲಿ ಬಂಧಿತನಾದ ವ್ಯಕ್ತಿಗೂ ಬಾಲಕಿಗೂ ಯಾವುದೇ ಸಂಬಂಧ ಇಲ್ಲ ಎಂದು ತಿಳಿದು ಬಂದಿದೆ. ಬಾಲಕಿಯ ಡಿಎನ್ಎ ಪರೀಕ್ಷೆ ನಡೆಸಿದಾಗ ಆರೋಪಿ ಯುವಕ ಇದರಲ್ಲಿ ಭಾಗಿಯಾಗಿಲ್ಲ ಎಂಬುದು ಗೊತ್ತಾಗಿದೆ.
ಡಿಎನ್ಎಯಲ್ಲಿ ಸತ್ಯ ಬಯಲು:ಅತ್ಯಾಚಾರಕ್ಕೆ ಒಳಗಾಗಿದ್ದಾಳೆ ಎಂದು ಹೇಳಲಾದ ಬಾಲಕಿಗೆ ಗರ್ಭಪಾತ ಮಾಡಲಾಗಿತ್ತು. ಬಳಿಕ ಆರೋಪಿ ಯುವಕನ ಕುಟುಂಬಸ್ಥರು ಆಕೆಯ ಡಿಎನ್ಎ ಪರೀಕ್ಷೆಗೆ ಒತ್ತಾಯಿಸಿದ್ದರು. ಈ ವೇಳೆ ನಡೆಸಿದ ಪರೀಕ್ಷೆಯಲ್ಲಿ ತದ್ವಿರುದ್ಧ ಫಲಿತಾಂಶ ಬಂದಿದೆ. ಅಲ್ಲದೇ, ಯುವತಿ ಮತ್ತು ಆಕೆಯ ಕುಟುಂಬಸ್ಥರು ತಮ್ಮ ಹೇಳಿಕೆಗಳನ್ನು ಬದಲಿಸಿದ್ದಾರೆ. ಇನ್ನೊಂದು ಗಂಭೀರ ಸಂಗತಿಯೆಂದರೆ ಬಾಲಕಿ ಅಪ್ರಾಪ್ತೆಯಲ್ಲ ಎಂಬುದು ದೃಢಪಟ್ಟಿದೆ.