ಚಂಡೀಗಢ (ಪಂಜಾಬ್): ಪಂಜಾಬ್ನಲ್ಲಿ ನಕಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ)ನೋರ್ವ ಸಿಕ್ಕಿ ಬಿದ್ದಿದ್ದಾನೆ. ಎಡಿಜಿಪಿ ಎಂದು ಹೇಳಿಕೊಂಡು ಉದ್ಯಮಿಗಳು, ಕ್ರಿಕೆಟಿಗರು ಮತ್ತು ಟ್ರಾವೆಲ್ ಏಜೆಂಟ್ಗಳಿಗೆ ಈ ಆಸಾಮಿ ವಂಚಿಸಿರುವುದು ಬಯಲಾಗಿದೆ. ಸದ್ಯ ನಕಲಿ ಅಧಿಕಾರಿ ಹಾಗೂ ಆತನ ಸಹಚರ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಮ್ರಿಯಾಂಕ್ ಸಿಂಗ್ ಎಂಬಾತನೇ ಬಂಧಿತ ನಕಲಿ ಎಡಿಜಿಪಿಯಾಗಿದ್ದು, ಈತ ಚಂಡೀಗಢದ ಎಡಿಜಿಪಿ ಅಲೋಕ್ ಕುಮಾರ್ ಎಂದು ಹೇಳಿಕೊಂಡು ವಂಚನೆ ಮಾಡುತ್ತಿದ್ದ. ಬೇರೆ ಬೇರೆ ಕಡೆಗಳಲ್ಲಿ ಎಡಿಜಿಪಿ ಹೆಸರು ಬಳಸಿಕೊಂಡು ಜನರಿಗೆ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ. ಮ್ರಿಯಾಂಕ್ ಸಿಂಗ್ ಸಹಚರ ರಾಘವ್ ಗೋಯಲ್ ಕೂಡ ವಂಚನೆಯಲ್ಲಿ ಭಾಗಿಯಾಗಿದ್ದಾನೆ. ಪಂಚಕುಲದಲ್ಲಿ ಇಬ್ಬರನ್ನೂ ಬಂಧಿಸಿ ಮೊಹಾಲಿಯ 8ನೇ ಹಂತದ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ. ಈಗಾಗಲೇ ವಂಚಕರನ್ನು ನ್ಯಾಯಾಲಯ ಹಾಜರು ಪಡಿಸಿದ್ದು, ಎರಡು ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಮ್ರಿಯಾಂಕ್ ಸಿಂಗ್, ಮಾಜಿ ಕ್ರಿಕೆಟಿಗ?: ಈ ವಂಚಕ ಮ್ರಿಯಾಂಕ್ ಸಿಂಗ್ ಹರಿಯಾಣದ ಮಾಜಿ ಕ್ರಿಕೆಟಿಗ ಎನ್ನಲಾಗಿದೆ. ಎಡಿಜಿಪಿ ಎಂಬ ಸೋಗಿನಲ್ಲಿ ಕ್ರಿಕೆಟಿಗ ರಿಷಬ್ ಪಂತ್ 1.5 ಕೋಟಿ ರೂ. ಮತ್ತು ಜಲಂಧರ್ ಮೂಲದ ಟ್ರಾವೆಲ್ ಏಜೆಂಟ್ಗೆ 5.76 ಲಕ್ಷ ರೂ.ಗಳನ್ನು ವಂಚಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
2021ರ ಜನವರಿ ತಿಂಗಳಲ್ಲಿ ಝೋನಲ್ ಕ್ರಿಕೆಟ್ ಅಕಾಡೆಮಿ ಶಿಬಿರದಲ್ಲಿ ರಿಷಬ್ ಪಂತ್ ಅವರನ್ನು ಮ್ರಿಯಾಂಕ್ ಸಿಂಗ್ ಭೇಟಿಯಾಗಿದ್ದ. ಆಗ ತನ್ನನ್ನು ತಾನು ಐಷಾರಾಮಿ ಕೈಗಡಿಯಾರಗಳು ಮತ್ತು ಇತರ ವಸ್ತುಗಳ ವ್ಯಾಪಾರದಲ್ಲಿ ತೊಡಗಿಸಿಕೊಂಡಿರುವುದಾಗಿ ಎಂದು ಹೇಳಿಕೊಂಡಿದ್ದ. ಅಲ್ಲದೇ, ರಿಷಬ್ ಪಂತ್ ಅವರಿಗೂ ತಮ್ಮೊಂದಿಗೆ ವ್ಯವಹಾರದಲ್ಲಿ ಸೇರುವಂತೆ ಕೇಳಿಕೊಂಡಿದ್ದ ಎಂದು ವರದಿಯಾಗಿದೆ.