ಪುಣೆ: ರಾಜ್ಯ ವಿಮಾನದಲ್ಲಿ ಡೆಹ್ರಾಡೂನ್‌ಗೆ ಪ್ರಯಾಣಿಸಲು ರಾಜ್ಯಪಾಲ ಬಿ ಎಸ್ ಕೊಶ್ಯರಿ ಅವರಿಗೆ ಅನುಮತಿ ನಿರಾಕರಿಸಿದ್ದಕ್ಕಾಗಿ ಬಿಜೆಪಿ ಮುಖಂಡ ದೇವೇಂದ್ರ ಫಡ್ನವೀಸ್ ಅವರು ಮಹಾರಾಷ್ಟ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಶಿವಸೇನೆ ನೇತೃತ್ವದ ಸರ್ಕಾರ ಅಹಂಕಾರ ಮತ್ತು ಬಾಲಿಶ ಕೃತ್ಯಗಳಲ್ಲಿ ತೊಡಗಿದೆ ಎಂದು ಆರೋಪಿಸಿದ್ದಾರೆ.
ಮಹಾರಾಷ್ಟ್ರ ರಾಜ್ಯ ಸರ್ಕಾರವು ರಾಜ್ಯಪಾಲರ ಸಾಂವಿಧಾನಿಕ ಹುದ್ದೆಯನ್ನು ಅವಮಾನಿಸಿದೆ ಎಂದು ಆರೋಪಿಸಿದ್ದಾರೆ. ಮೂಲಗಳ ಪ್ರಕಾರ, ಕೊಶಾರಿ ಗುರುವಾರ ಬೆಳಗ್ಗೆ 10 ಗಂಟೆಗೆ ಉತ್ತರಾಖಂಡದ ಡೆಹ್ರಾಡೂನ್‌ಗೆ ರಾಜ್ಯ ಸರ್ಕಾರಿ ವಿಮಾನದಲ್ಲಿ ಪ್ರಯಾಣಿಸಲು ನಿರ್ಧರಿದ್ದರು. ಆದರೆ, ವಿಮಾನಕ್ಕೆ ರಾಜ್ಯ ಅನುಮತಿ ನೀಡಲಿಲ್ಲ ಹೀಗಾಗಿ ಅವರು ವಾಣಿಜ್ಯ ವಿಮಾನದಲ್ಲಿ ಮಧ್ಯಾಹ್ನ 12.15 ರ ಸುಮಾರಿಗೆ ಡೆಹ್ರಾಡೂನ್‌ಗೆ ತೆರಳಿದರು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಫಡ್ನವೀಸ್, ಇದು ಒಂದು ದುರದೃಷ್ಟಕರ ಘಟನೆ. ಇಂತಹ ಘಟನೆ ಈ ಹಿಂದೆ ರಾಜ್ಯದಲ್ಲಿ ನಡೆದಿಲ್ಲ. ರಾಜ್ಯಪಾಲರು ಒಬ್ಬ ವ್ಯಕ್ತಿಯಲ್ಲ, ಇದು ಒಂದು ಹುದ್ದೆ. ಜನರು ಬಂದು ಹೋಗುತ್ತಾರೆ, ಆದರೆ ಹುದ್ದೆ ಉಳಿಯುತ್ತದೆ. ರಾಜ್ಯಪಾಲರು ರಾಜ್ಯದ ಮುಖ್ಯಸ್ಥ. ವಾಸ್ತವವಾಗಿ, ಮುಖ್ಯಮಂತ್ರಿ ಮತ್ತು ಅವರ ಸಂಪುಟವನ್ನು ನೇಮಕ ಮಾಡುವುದು ರಾಜ್ಯಪಾಲರು ಎಂದು ಹೇಳಿದರು.