ಬೆಂಗಳೂರು :ನೆಲಮಂಗಲದಲ್ಲಿರುವ ಯುನೈಟೆಡ್ ಬ್ರೇವರೇಜಸ್ ಲಿಮಿಟೆಡ್ ಮತ್ತು ಕೆಬಿಡಿಎಲ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಗಳು ತ್ಯಾಜ್ಯ ನೀರನ್ನು ಸಂಸ್ಕರಿಸದೆ ಸಮೀಪದ ಕೆರೆಗಳಿಗೆ ಬಿಡುತ್ತಿವೆ ಎಂದು ಆರೋಪಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ಈ ಕುರಿತು ನೆಲಮಂಗಲದ ಗಂಗಾಧರಪಾಳ್ಯ ನಿವಾಸಿ ಎಂ.ನಾರಾಯಣಸ್ವಾಮಿ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಸಿಜೆ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ, ರಾಜ್ಯ ಸರ್ಕಾರ, ಅರಣ್ಯ ಮತ್ತು ಪರಿಸರ ಇಲಾಖೆ, ಸಣ್ಣ ನೀರಾವರಿ, ಕೆರೆ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ, ನೆಲಮಂಗಲ ತಹಶೀಲ್ದಾರ್, ಕೆಂಪೇಗೌಡನಹಳ್ಳಿ ಪಿಡಿಒ, ಯುನೈಟೆಡ್ ಬ್ರೇವರೇಜಸ್ ಲಿಮಿಟೆಡ್ ಮತ್ತು ಕೆಬಿಡಿಎಲ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಗಳಿಗೆ ನೋಟಿಸ್ ಜಾರಿ ಮಾಡಿದೆ.
ಅರ್ಜಿದಾರರ ಆರೋಪವೇನು?:ಯುಬಿಎಲ್ ಮತ್ತು ಕೆಬಿಡಿಎಲ್ ಕಾರ್ಖಾನೆಗಳು ನೆಲಮಂಗಲದಲ್ಲಿ ಲಿಕ್ಕರ್ ಮತ್ತು ಡಿಸ್ಟಲರೀಸ್ ಉತ್ಪಾದನೆಯಲ್ಲಿ ತೊಡಗಿದ್ದು, ರಾಸಾಯನಿಕ ತ್ಯಾಜ್ಯ ನೀರನ್ನು ಸಂಸ್ಕರಿಸದೆ ಸಮೀಪದ ಕೆರೆಗಳಿಗೆ ಹರಿಸುತ್ತಿವೆ. ಪರಿಣಾಮ ಇಲ್ಲಿನ ಪರಿಸರ, ಕೃಷಿ ಚಟುವಟಿಕೆ ಹಾಗೂ ಪಶುಸಂಗೋಪನೆಗೆ ಪ್ರತಿಕೂಲ ಪರಿಣಾಮ ಬೀರುತ್ತಿದೆ.