ನವದೆಹಲಿ:ಕೋವಿಡ್ ಪರಿಹಾರ ಯೋಜನೆಯ ಭಾಗವಾಗಿ ಲಸಿಕಾ ನಿಧಿ ಅಡಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯೂಹೆಚ್‌ಒ) 50 ಸಾವಿರದಿಂದ 1 ಲಕ್ಷದ ವರೆಗೆ ನಗದು ಹಣವನ್ನು ನೀಡಲಿದೆ ಎಂಬುದು ಸುಳ್ಳು ಸಂದೇಶ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಕೋವಿಡ್ ಪರಿಹಾರ ನಿಧಿಯಡಿ ನಗದು ಬಹುಮಾನ ನೀಡುತ್ತಾ WHO? ಈ ಲಿಂಕ್ ಕ್ಲಿಕ್ ಮಾಡೋ ಮುನ್ನ ಎಚ್ಚರ! - PIB Fact Check
ವಿಶ್ವ ಆರೋಗ್ಯ ಸಂಸ್ಥೆಯು ಕೋವಿಡ್ ಪರಿಹಾರ ಯೋಜನೆಯಡಿ ನಗದು ಹಣ ನೀಡುತ್ತದೆ ಎಂದು ವಾಟ್ಸಾಪ್‌ನಲ್ಲಿ ಹರಿದಾಡುತ್ತಿರುವ ಸಂದೇಶ ಸುಳ್ಳು. ಅಪರಿಚಿತ ಮತ್ತು ಪರಿಶೀಲಿಸದ URL ಗಳನ್ನು ಕ್ಲಿಕ್ ಮಾಡದಿರಿ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.
"50,000 ರೂಪಾಯಿಯ ಹೊಸ ಕೊರೊನಾ ವೈರಸ್ ಸಬ್ಸಿಡಿ ಪಡೆದರೆ ವಿಶ್ವ ಆರೋಗ್ಯ ಸಂಸ್ಥೆಯಿಂದ ನಗದು ಬಹುಮಾನ ಸ್ವೀಕರಿಸುವ ಅವಕಾಶವಿದೆ. 50,000 ರಿಂದ 1,00,000 ರೂ. ನೀಡುವ ಈ ಯೋಜನೆಗೆ ನಾವು ದಿನಕ್ಕೆ 10,000 ಜನರನ್ನು ಆಯ್ಕೆ ಮಾಡುತ್ತೇವೆ ಮತ್ತು ಅವರಿಗೆ ನಗದು ಹಣ ನೀಡುತ್ತೇವೆ " ಎಂಬ ಸಂದೇಶ ವಾಟ್ಸಾಪ್‌ನಲ್ಲಿ ಹರಿದಾಡುತ್ತಿದೆ. ಸಂದೇಶದ ಕೊನೆಯಲ್ಲಿ ಈ ಪ್ರಯೋಜನವನ್ನು ಪಡೆಯಲು ಬಳಕೆದಾರರು ತುರ್ತಾಗಿ ಕ್ಲಿಕ್ ಮಾಡಿ ಎಂದು ಲಿಂಕ್ ಒಂದನ್ನು ಕೊಡಲಾಗಿದೆ.
ಇದು ಸಂಪೂರ್ಣ ತಪ್ಪು ಹಾಗೂ ಸುಳ್ಳು ಮಾಹಿತಿ ಎಂದು ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸಾರಾಂಗ ಸಚಿವಾಲಯದಡಿಯಲ್ಲಿ ಬರುವ 'ಪ್ರೆಸ್ ಇನ್ಫರ್ಮೇಷನ್ ಬ್ಯೂರೋ' ಸುದ್ದಿ ಸಂಸ್ಥೆಯು ತಿಳಿಸಿದೆ. ಇದು ವೈಯಕ್ತಿಕ ಮಾಹಿತಿಯನ್ನು ಪಡೆಯುವ ದುರುದ್ದೇಶಪೂರಿತ ಪ್ರಯತ್ನವಾಗಿದೆ ಎಂದು ಸ್ಪಷ್ಟಪಡಿಸಿದೆ. ಅಪರಿಚಿತ ಮತ್ತು ಪರಿಶೀಲಿಸದ URL ಗಳನ್ನು ಕ್ಲಿಕ್ ಮಾಡದಿರಿ, ಜಾಗರೂಕರಾಗಿರಿ ಎಂದು ಸರ್ಕಾರ ಎಚ್ಚರಿಕೆ ನೀಡಿದೆ.