ಮುಂಬೈ:ನಿವೃತ್ತ ಐಎಎಸ್ ಅಧಿಕಾರಿ ಮಹೇಶ್ ಝಾಗ್ಡೆ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರಿದ್ದ ಪೋಸ್ಟ್ ಅನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದರು. ಸಾಮಾಜಿಕ ಮಾಧ್ಯಮ ಸಂಸ್ಥೆ ಈ ಪೋಸ್ಟ್ ಅನ್ನು ಅಳಿಸಿ ಹಾಕಿದ್ದು, ಇದಕ್ಕೆ ನೀಡಿದ ಕಾರಣ ಮಾತ್ರ ಅಚ್ಚರಿ ಮೂಡಿಸಿದೆ. ಫೇಸ್‌ಬುಕ್ ನಡೆಗೆ ಟೀಕೆಯೂ ವ್ಯಕ್ತವಾಗಿದೆ.
ನಡೆದಿದ್ದೇನು?:ಸ್ವಾತಂತ್ರ್ಯ ಹೋರಾಟದ ವೇಳೆ ಮಹಾತ್ಮ ಗಾಂಧಿ ಅವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳಿದ ಬಳಿಕ ಸರಳ ಜೀವನಶೈಲಿಯನ್ನು ಅನುಸರಿಸಿದರು. ರಾಷ್ಟ್ರಪಿತರು ಬದುಕಿನ ಕೊನೆಯವರೆಗೂ ಪಂಚೆಯಲ್ಲೇ ಜೀವಿಸಿದರು. ಗಾಂಧಿಯವರ ವೇಷಭೂಷಣ ಜಗತ್ಪ್ರಸಿದ್ಧವೇ ಸರಿ. ಅಂಥದ್ದೇ ಒಂದು ಚಿತ್ರವುಳ್ಳ ಪೋಸ್ಟ್ ಅನ್ನು ನಿವೃತ್ತ ಐಎಎಸ್ ಅಧಿಕಾರಿ ಮಹೇಶ್ ಝಾಗ್ಡೆ ಅವರು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದರು. ಆದರೆ, ಸಾಮಾಜಿಕ ಮಾಧ್ಯಮಗಳ ನಿಯಮಾವಳಿಗೆ ವಿರುದ್ಧ. ಈ ಫೋಟೋವನ್ನು ಲೈಂಗಿಕ ಆಸಕ್ತಿಯ ವಿಷಯವೆಂದು ಪರಿಗಣಿಸಿ ಫೇಸ್‌ಬುಕ್ ಸಂಸ್ಥೆ ಪೋಸ್ಟ್ ಅನ್ನು ಡಿಲಿಟ್ ಮಾಡಿದೆ. ಸಂಸ್ಥೆಯ ಈ ಕ್ರಮ ಆಕ್ರೋಶಕ್ಕೆ ಕಾರಣವಾಗಿದೆ.
ಮಹೇಶ್ ಝಾಗ್ಡೆ ಅವರು ಫೇಸ್ಬುಕ್ನಲ್ಲಿ ಮತ್ತೊಂದು ಪೋಸ್ಟ್ ಮಾಡುವ ಮೂಲಕ ಪ್ರತಿಭಟಿಸಿದ್ದಾರೆ. 'ಮಹಾತ್ಮ ಗಾಂಧಿ ಅವರು ವಿಶ್ವವೇ ಮೆಚ್ಚುವಂತೆ ಸರಳ ಜೀವನ ನಡೆಸಿದವರು. ಜಿ 20 ಶೃಂಗಸಭೆಯ ಸಂದರ್ಭದಲ್ಲಿ ವಿಶ್ವದ ಉನ್ನತ ನಾಯಕರು ಗೌರವ ಸಲ್ಲಿಸಿದರು. ಅವರು ಪಂಚೆ ತೊಟ್ಟಿದ್ದ ಚಿತ್ರವು ಸಾಮಾಜಿಕ ಮಾನದಂಡಗಳಿಗೆ ವಿರುದ್ಧವಾಗಲು ಹೇಗೆ ಸಾಧ್ಯ. ಫೋಟೋದಲ್ಲಿ ನಗ್ನತೆ ಅಥವಾ ಲೈಂಗಿಕ ಆಸಕ್ತಿಯ ವಿಷಯವೆಲ್ಲಿದೆ. ಅದು ಉಪ್ಪಿನ ಸತ್ಯಾಗ್ರಹ ವೇಳೆಯ ಚಿತ್ರವಾಗಿದೆ' ಎಂದು ಬರೆದುಕೊಂಡಿದ್ದಾರೆ.