ಹೈದರಾಬಾದ್: ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಹ್ಯಾಕ್ ಮಾಡುವುದು ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿದೆ. ಇದೀಗ ಪೊಲೀಸ್ ಠಾಣೆಯೊಂದರ ಫೇಸ್‌ಬುಕ್ ಖಾತೆ ಹ್ಯಾಕ್ ಮಾಡಿದ ಅಪರಿಚಿತ ದುಷ್ಕರ್ಮಿಗಳು ಅಶ್ಲೀಲ ವಿಡಿಯೋಗಳನ್ನು ಪೋಸ್ಟ್ ಮಾಡಿರುವ ಘಟನೆ ಹೈದರಾಬಾದ್ನಲ್ಲಿ ಬೆಳಕಿಗೆ ಬಂದಿದೆ.
ಹೈದರಾಬಾದ್ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಆಸಿಫ್‌ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಬುಧವಾರ ರಾತ್ರಿ ಫೇಸ್‌ಬುಕ್ ಅಕೌಂಟ್ ಚೆಕ್ ಮಾಡಿದಾಗ ವಿಷಯ ತಿಳಿದು ಬಂದಿದ್ದು, ಕೂಡಲೇ ಎಚ್ಚೆತ್ತ ಪೊಲೀಸರು ಖಾತೆ ಸ್ಥಗಿತಗೊಳಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
"ಆಸಿಫ್‌ನಗರ ಠಾಣೆಯ ಕಾನ್ಸ್ಟೇಬಲ್ ರವೀಂದರ್ ಬಾಬು ಅವರು ಠಾಣೆಯ ಅಧಿಕೃತ ಫೇಸ್ ಬುಕ್ ಖಾತೆಗೆ ಬುಧವಾರ ರಾತ್ರಿ ಲಾಗ್ ಇನ್ ಆಗಲು ಯತ್ನಿಸಿದರಾದರೂ ಸಾಧ್ಯವಾಗಲಿಲ್ಲ. ಕೆಲ ನಿಮಿಷಗಳ ನಂತರ ಮತ್ತೆ ಲಾಗಿನ್ ಆಗಲು ಪ್ರಯತ್ನಿಸಿದ್ದು, ಆಗ ಕೂಡ ಸಮಸ್ಯೆ ಕಂಡು ಬಂದಿದೆ. ಬಳಿಕ ತಮ್ಮ ಫೋನ್‌ನಲ್ಲಿ ಖಾತೆ ಪರಿಶೀಲಿಸಿದಾಗ ಐದು ಅಶ್ಲೀಲ ವಿಡಿಯೋಗಳನ್ನು ಅಪ್ಲೋಡ್ ಮಾಡಿರುವುದು ಕಂಡು ಬಂದಿದೆ. ಕೂಡಲೇ ಮೇಲಧಿಕಾರಿಗಳಿಗೆ ವಿಷಯ ತಿಳಿಸಿದ್ದು, ಅಕೌಂಟ್ ಹ್ಯಾಕ್ ಆಗಿರುವುದು ಪತ್ತೆಯಾಗಿದೆ. ಈಗಾಗಲೇ ವಿಡಿಯೋಗಳನ್ನು ಅಳಿಸಲಾಗಿದ್ದು, 6,000 ಕ್ಕೂ ಹೆಚ್ಚು ಮಂದಿ ಫಾಲೋವರ್ಸ್ ಮಾಡುತ್ತಿದ್ದಾರೆ" ಎಂದು ಇನ್ಸ್ಪೆಕ್ಟರ್ ಎಸ್ ನವೀನ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ :ಪತ್ನಿ ಮೆಚ್ಚಿಸಲು ಪಾಸ್‌ಪೋರ್ಟ್ ಸಿಸ್ಟಮ್ ಹ್ಯಾಕ್ ಮಾಡಿದ ಸಾಫ್ಟ್ವೇರ್ ಇಂಜಿನಿಯರ್!