ಹೈದರಾಬಾದ್: ತೆಲಂಗಾಣದ ಆರೋಗ್ಯ ಅಧಿಕಾರಿಗಳು ಎರಡನೇ ಹಂತದ 'ಕಾಂತಿ ವೆಲುಗು' ಯೋಜನೆಯ ಅಡಿಯಲ್ಲಿ ಒಂದು ಕೋಟಿಗೂ ಹೆಚ್ಚು ಜನರಿಗೆ ಉಚಿತ ನೇತ್ರ ಪರೀಕ್ಷೆ ನಡೆಸಿದ್ದಾರೆ. ಇದು ವಿಶ್ವದ ಅತಿದೊಡ್ಡ ನೇತ್ರ ತಪಾಸಣೆ ಕಾರ್ಯಕ್ರಮವೆಂದು ಹೇಳಲಾಗಿದೆ. ಜನವರಿಯಲ್ಲಿ ಎರಡನೇ ಹಂತ ಪ್ರಾರಂಭಿಸಿದ ನಂತರ, 1,500 ವೈದ್ಯಕೀಯ ತಂಡಗಳು 1,01,65,529 ಜನರನ್ನು ಪರೀಕ್ಷಿಸಿವೆ. ಈ ಪೈಕಿ 47,70,757 ಪುರುಷರು, 53,85,293 ಮಹಿಳೆಯರು ಮತ್ತು 3,360 ತೃತೀಯ ಲಿಂಗಿಗಳು ಸೇರಿದ್ದಾರೆ. ಈ ಮೂಲಕ ಶೇ 64.07 ರಷ್ಟು ಗುರಿ ತಲುಪಿದ್ದೇವೆ. ಎರಡನೇ ಹಂತವು 1.5 ಕೋಟಿ ಜನರನ್ನು ಒಳಗೊಳ್ಳುವ ಗುರಿ ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
73 ಲಕ್ಷ ಜನರಿಗೆ ಯಾವುದೇ ಕಣ್ಣಿನ ಸಮಸ್ಯೆ ಇಲ್ಲ: 16.33 ಲಕ್ಷ ಜನರಿಗೆ ಉಚಿತವಾಗಿ ಓದುವ ಕನ್ನಡಕಗಳನ್ನು ವಿತರಿಸಲಾಗಿದ್ದು, 12.31 ಜನರಿಗೆ ಪ್ರಿಸ್ಕ್ರಿಪ್ಷನ್ ಕನ್ನಡಕದ ಅವಶ್ಯಕತೆ ಇದೆ. ಸುಮಾರು 73 ಲಕ್ಷ ಜನರಿಗೆ ಯಾವುದೇ ಕಣ್ಣಿನ ಸಮಸ್ಯೆ ಇಲ್ಲ ಎಂದು ತಿಳಿದುಬಂದಿದೆ. ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಮಹತ್ವಾಕಾಂಕ್ಷೆಯ ಯೋಜನೆಯನ್ನು 2018 ರಲ್ಲಿ ಪ್ರಾರಂಭಿಸಲಾಗಿತ್ತು.
ಯೋಜನೆಯ ಎರಡನೇ ಹಂತವನ್ನು ಜನವರಿ 18 ರಂದು ಖಮ್ಮಮ್ ಜಿಲ್ಲೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮತ್ತು ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ. ರಾಜಾ ಅವರ ಉಪಸ್ಥಿತಿಯಲ್ಲಿ ಕೆಸಿಆರ್ ಪ್ರಾರಂಭಿಸಿದ್ದರು.
ಇದನ್ನೂ ಓದಿ :ಅಯೋಧ್ಯೆ ಶ್ರೀರಾಮನ ಸನ್ನಿಧಿಯಲ್ಲಿ ಮಹಾ ಸಿಎಂ ಶಿಂಧೆ, ಡಿಸಿಎಂ ಫಡ್ನವೀಸ್: ವಿಡಿಯೋ