ಕರ್ನಾಟಕ

karnataka

ETV Bharat / bharat

ಶಾಸಕರ ಹತ್ಯೆ ಸಂಚು: ಮಹಿಳೆ ಮನೆಯಲ್ಲಿ 95 ಜಿಲೆಟಿನ್​ ಕಡ್ಡಿಗಳು, 10 ಡಿಟೋನೇಟರ್​ಗಳು ಪತ್ತೆ - ಶಾಸಕರ ಮೇಲೆ ಯಾಕೆ ದ್ವೇಷ

ತೆಲಂಗಾಣದ ಶಾಸಕ ಜೀವನ್ ರೆಡ್ಡಿ ಹತ್ಯೆಗೆ ಸಂಚು ರೂಪಿಸಿ ಆರೋಪದ ಮೇಲೆ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ, ಆರೋಪಿಯ ಮನೆಯಲ್ಲಿ ಭಾರಿ ಪ್ರಮಾಣದ ಸ್ಫೋಟಕಗಳು ಪತ್ತೆಯಾಗಿವೆ.

explosives-seized-in-telangana-in-another-plot-to-kill-mla
ಶಾಸಕರ ಹತ್ಯೆ ಸಂಚು: ಮಹಿಳೆ ಮನೆಯಲ್ಲಿ 95 ಜಿಲೆಟಿನ್​ ಕಡ್ಡಿಗಳು, 10 ಡಿಟೋನೇಟರ್​ಗಳು ಪತ್ತೆ

By

Published : Feb 18, 2023, 3:53 PM IST

ಹೈದರಾಬಾದ್​ (ತೆಲಂಗಾಣ): ತೆಲಂಗಾಣದ ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿ (ಬಿಆರ್​ಎಸ್​) ಪಕ್ಷದ ಶಾಸಕ ಜೀವನ್ ರೆಡ್ಡಿ ಅವರ ಹತ್ಯೆಗೆ ಮತ್ತೊಂದು ಸಂಚು ರೂಪಿಸಿದ್ದ ಘಟನೆ ಬಯಲಿಗೆ ಬಂದಿದೆ. ಈ ಸಂಬಂಧ ನಿಜಾಮಾಬಾದ್​ ಜಿಲ್ಲೆಯಲ್ಲಿ ಓರ್ವ ಮಹಿಳೆ ಸಮೇತ 95 ಜಿಲೆಟಿನ್​ ಕಡ್ಡಿಗಳು ಹಾಗೂ 10 ಡಿಟೋನೇಟರ್​ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಶಾಸಕ ಜೀವನ್​ ರೆಡ್ಡಿ ನಿಜಾಮಾಬಾದ್ ಜಿಲ್ಲೆಯ ಆರ್ಮೂರ್​ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಕಳೆದ ವರ್ಷ ಕೂಡ ಶಾಸಕರ ಕೊಲೆಗೆ ಪ್ರಯತ್ನಿಸಲಾಗಿತ್ತು. ಇದೀಗ ಮತ್ತೆ ಇಂತಹದ್ದೆ ಯತ್ನ ನಡೆದಿದೆ. ಈ ಪ್ರಕರಣದ ಕುರಿತಾಗಿ 41 ವರ್ಷದ ಬೋಂತಾ ಸುಗುಣ ಎಂಬ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ, ಈ ಸಂಚಿನಲ್ಲಿ ಪ್ರಸಾದ್ ಗೌಡ್ ಎಂಬಾತನ ಕೈವಾಡ ಎಂದೂ ಪೊಲೀಸರು ಹೇಳಿದ್ದು, ಸದ್ಯ ಈ ಆರೋಪಿ ಇನ್ನೊಂದು ಪ್ರಕರಣದಲ್ಲಿ ಜೈಲಿನಲ್ಲಿದ್ದಾನೆ.

ಮನೆಯಲ್ಲಿ ಸ್ಫೋಟಕಗಳು ಪತ್ತೆ: ನಿಜಾಮಾಬಾದ್​ ಹೊರ ವಲಯದಲ್ಲಿರುವ ಕಂಠೇಶ್ವರ್​ ನ್ಯೂ ಹೌಸಿಂಗ್​ ಬೋರ್ಡ್​ ಕಾಲೋನಿಯಲ್ಲಿ ಆರೋಪಿ ಮಹಿಳೆ ಸುಗಣ ವಾಸವಾಗಿದ್ದು, ಈಕೆಯ ಮನೆಯಲ್ಲಿ ಈ ಭಾರಿ ಸ್ಫೋಟಕಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಜನವರಿ 9ರಂದು ಮಕ್ಲೂರು ಮಂಡಲದ ಕಲ್ಲೇದ ಪ್ರಸಾದ್ ಗೌಡ್​ ಎಂಬುವರು ಈ ಜಿಲೆಟಿನ್​ ಕಡ್ಡಿಗಳು ಮತ್ತು ಡಿಟೋನೇಟರ್​ಗಳನ್ನು ನೀಡಿದ್ದರು. ಅಲ್ಲದೇ, ಇವುಗಳನ್ನು ಅಗತ್ಯವಿದ್ದಾಗ ಬಳಸಿಕೊಳ್ಳಬಹುದು ಹೇಳಿ ತಮ್ಮ ಮನೆಯಲ್ಲಿ ಇರಿಸಿದ್ದರು ಎಂಬುವುದಾಗಿ ಆರೋಪಿ ಸುಗುಣ ಬಾಯ್ಬಿಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಈ ಹಿಂದೆ ಶಾಸಕರ ಮನೆಗೆ ನುಗ್ಗಿದ ಆರೋಪಿ: 2022ರ ಆಗಸ್ಟ್ 2ರಂದು ರಾತ್ರಿ ಶಾಸಕ ಜೀವನ್ ರೆಡ್ಡಿ ಅವರ​ ಹತ್ಯೆಗೆ ಮೊದಲ ಬಾರಿಗೆ ಪ್ರಯತ್ನ ನಡೆದಿತ್ತು. ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನಲ್ಲಿರುವ ಶಾಸಕರ ಮನೆಗೆ ಗನ್​ ಹಿಡಿದು ನುಗ್ಗಿದ್ದ ಆರೋಪಿ ಪ್ರಸಾದ್​ ಗೌಡ್ ಭದ್ರತಾ ಸಿಬ್ಬಂದಿಗೆ ಸಿಕ್ಕಿಬಿದ್ದಿದ್ದ. ಈ ವೇಳೆ ಆರೋಪಿ ಬಳಿ ಕಂಟ್ರಿ ಮೇಡ್​ ಗನ್, ಏರ್​ ಪಿಸ್ತೂಲ್​ ಹಾಗೂ ಬಟನ್ ಚಾಕು ಪತ್ತೆಯಾಗಿತ್ತು.

ಅಂದು ಆರೋಪಿ ಪ್ರಸಾದ್​ ಗೌಡ್​ ಗನ್ ಮತ್ತು ಚಾಕು ಸಮೇತವಾಗಿ ನೇರ ಶಾಸಕರ ಮನೆಗೆ ಹೋಗಿದ್ದ. ಗಸ್ತು ಸಿಬ್ಬಂದಿಯಿಂದ ಕಣ್ಣು ತಪ್ಪಿಸಿ ಮೂರನೇ ಮಹಡಿ ತಲುಪಿದ್ದ. ಆಗ ಶಾಸಕ ಜೀವನ್ ರೆಡ್ಡಿ ಯಾಕೆ ಬಂದಿರುವುದಾಗಿ ಪ್ರಶ್ನೆ ಮಾಡಿದ್ದರು. ಈ ವೇಳೆ ತಕ್ಷಣವೇ ಕೆಳಗಿಳಿದು ಬರಲು ಶಾಸಕರು ಮುಂದಾಗಿದ್ದಾಗ ಆರೋಪಿ ಜಗಳವಾಡಿದ್ದ. ಜೊತೆಗೆ ಶಾಸಕರ ಮೇಲೆ ಹಲ್ಲೆ ಕೂಡ ನಡೆಸಿದ್ದ. ಈ ವೇಳೆ ಸಿಬ್ಬಂದಿ ಆತನನ್ನು ಹಿಡಿಯಲು ಯತ್ನಿಸಿದಾಗ ಆತನ ಸೊಂಟದ ಬಳಿ ಗನ್​​​ ಪತ್ತೆಯಾಗಿತ್ತು. ತೀವ್ರ ಹುಡುಕಾಟದ ಬಳಿಕ ಜೇಬಿನಲ್ಲಿ ಚಾಕು ಕೂಡ ದೊರೆತಿತ್ತು. ಈ ಸಂದರ್ಭದಲ್ಲಿ ಶಾಸಕ ಜೀವನ್​ ರೆಡ್ಡಿಗೆ ಸಣ್ಣ-ಪುಟ್ಟ ಗಾಯಗಳು ಕೂಡ ಆಗಿದ್ದವು.

ಶಾಸಕರ ಮೇಲೆ ಯಾಕೆ ದ್ವೇಷ?: ಮಕ್ಲೂರು ಮಂಡಲದ ಕಲ್ಲಾಡಿ ಗ್ರಾಮದ ಸರಪಂಚ್​ ಆಗಿದ್ದ ತನ್ನ ಪತ್ನಿಯ ಅಮಾನತಿಗೆ ಆರ್ಮೂರ್ ಶಾಸಕರೇ ಕಾರಣ ಎಂದು ಆರೋಪಿ ಪ್ರಸಾದ್​ ಗೌಡ್​ ಭಾವಿಸಿದ್ದ. ಇದೇ ಕಾರಣದಿಂದಾಗಿ ಶಾಸಕರ ವಿರುದ್ಧ ದ್ವೇಷ ಸಾಧಿಸಲು ಮುಂದಾಗಿದ್ದ. ಇದರ ನಡುವೆ ಬಿಹಾರದ ಮುನ್ನಾ ಕುಮಾರ್ ಎಂಬಾತನ ಬಳಿ 60 ಸಾವಿರ ರೂ.ಗೆ ಕಂಟ್ರಿಮೇಡ್ ಗನ್​ ಲಭ್ಯವಾಗಿದೆ ಎಂದು ಪ್ರಸಾದ್​ ಗೌಡ್​ಗೆ​ ಸುಗುಣ ನೀಡಿದ್ದಳು. ನಂತರ ಗನ್​ ಪಡೆದು ಪ್ರಸಾದ್​ ನೀಡಿದ್ದ ಹಣವನ್ನು ಮುನ್ನಾಗೆ ಸುಗುಣ ವರ್ಗಾಯಿಸಿದ್ದಳು ಎಂದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿತ್ತು.

ಇದೇ ಪ್ರಕರಣ ಸಂಬಂಧ ಪ್ರಸಾದ್​ ಗೌಡ್‌ಗೆ ಸಹಾಯ ಮಾಡಿದ ಆರೋಪದಲ್ಲಿ ಸುಗುಣ ಸೇರಿದಂತೆ ಇತರ ನಾಲ್ವರನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಇದರ ನಂತರ ಕೂಡ ಆರೋಪಿಗಳು ಮತ್ತೆ ಶಾಸಕರ ಹತ್ಯೆಗೆ ಸಂಚು ರೂಪಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಹೀಗಾಗಿಯೇ ಪೊಲೀಸರು ಸುಗುಣ ಮನೆಯನ್ನು ಶೋಧಿಸಿದಾಗ ಸ್ಫೋಟಕಗಳನ್ನು ಪತ್ತೆಯಾಗಿವೆ. ಸದ್ಯ ವ್ಯಕ್ತಿಯೊಬ್ಬನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಪ್ರಕರಣದಲ್ಲಿ ಪ್ರಸಾದ್​ ಗೌಡ್​ ಜೈಲಿನಲ್ಲಿದ್ದಾನೆ.

ಇದನ್ನೂ ಓದಿ:₹ 15 ಸಾವಿರಕ್ಕಾಗಿ ಪಾಕ್​ಗೆ ಭಾರತದ ಸೇನಾ ಮಾಹಿತಿ ಹಂಚಿಕೆ: ಯೋಧನ ಸೆರೆ, ವಿಚಾರಣೆ

ABOUT THE AUTHOR

...view details