ಎರ್ನಾಕುಲಂ (ಕೇರಳ): ಇಲ್ಲಿನ ನಿಟ್ಟಾ ಜಿಲಟಿನ್ ಇಂಡಿಯಾ ಲಿಮಿಟೆಡ್ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದೆ. ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ನಾಲ್ಕು ಮಂದಿ ಗಾಯಗೊಂಡಿದ್ದಾರೆ. ಮೃತನನ್ನು ರಾಜನ್ ಒರಂಗ್ (30) ಎಂದು ಗುರುತಿಸಲಾಗಿದೆ. ಇವರು ಪಂಜಾಬ್ ರಾಜ್ಯದ ನಿವಾಸಿಯಾಗಿದ್ದಾರೆ.
ಎರ್ನಾಕುಲಂನ ಕಕ್ಕನಾಡ್‌ನಲ್ಲಿರುವ ಕಾರ್ಖಾನೆಯಲ್ಲಿ ಕಳೆದ ರಾತ್ರಿ (ಮಂಗಳವಾರ) 8 ಗಂಟೆಯ ಸುಮಾರಿಗೆ ಘಟನೆ ನಡೆಯಿತು. ರಾಸಾಯನಿಕ ಪದಾರ್ಥಗಳನ್ನು ದಾಸ್ತಾನಿಟ್ಟಿದ್ದ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದೆ. ಸುದ್ದಿ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ.
ಸ್ಥಳೀಯ ಪೊಲೀಸರು ಘಟನೆಯ ತನಿಖೆ ನಡೆಸುತ್ತಿದ್ದಾರೆ. ಇಂದು ಬೆಳಗ್ಗೆ ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿಯೂ ಘಟನಾ ಸ್ಥಳಕ್ಕೆ ಆಗಮಿಸಿದ್ದು, ತನಿಖೆ ಕೈಗೊಂಡಿದ್ದಾರೆ. ಸದ್ಯಕ್ಕೆ ಸ್ಫೋಟಕ್ಕೇನು ಕಾರಣ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಈ ಕುರಿತು ಇನ್ನಷ್ಟು ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಕೆಲದಿನಗಳ ಹಿಂದೆ ಪಾಲಕ್ಕಾಡ್‌ನ ಕಂಜಿಕೋಡ್‌ನಲ್ಲಿರುವ ಕೈರಾಲಿ ಸ್ಟೀಲ್ ಫ್ಯಾಕ್ಟರಿಯಲ್ಲಿ ಸ್ಫೋಟ ಸಂಭವಿಸಿ ಓರ್ವ ಕಾರ್ಮಿಕ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದರು. ಕೆಲಸದ ವೇಳೆ ಕಾರ್ಖಾನೆಯಲ್ಲಿ ಕುಲುಮೆ (ಶಾಖದ ಚಿಮಣಿ) ಸ್ಫೋಟಗೊಂಡು ಅವಘಡ ಸಂಭವಿಸಿತ್ತು. ನಂತರ ಬೆಂಕಿ ಕಾಣಿಸಿಕೊಂಡಿತ್ತು. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದರು.
ವಿಜಯಪುರದಲ್ಲೂ ಇಂತಹದ್ದೇ ಘಟನೆ:ವಿಜಯಪುರ ಜಿಲ್ಲೆಯಬಬಲೇಶ್ವರ ತಾಲೂಕಿನ ಕೃಷ್ಣಾನಗರದಲ್ಲಿರುವ ಸಕ್ಕರೆ ಕಾರ್ಖಾನೆಯಲ್ಲಿ ನೂತನವಾಗಿ ಸ್ಥಾಪಿತವಾದ ಬಾಯ್ಲರ್ ಸ್ಪೋಟಗೊಂಡು ನಾಲ್ವರು ಕಾರ್ಮಿಕರು ಗಾಯಗೊಂಡಿದ್ದ ಘಟನೆ ಇತ್ತೀಚೆಗೆ ನಡೆದಿತ್ತು. ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನೂತನವಾಗಿ ಬಾಯ್ಲರ್ ಸ್ಥಾಪನೆ ಮಾಡಲಾಗಿತ್ತು. ನೂತನ ಬಾಯ್ಲರ್ ಅನ್ನು ಪ್ರಾಯೋಗಿಕವಾಗಿ ಪರೀಕ್ಷೆ ಮಾಡುವ ವೇಳೆ ಸ್ಪೋಟಗೊಂಡಿತ್ತು. ನಾಲ್ವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದರು.
ಆನೇಕಲ್ ತಾಲೂಕಿನ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ಕಾರ್ಖಾನೆಯೊಂದರಲ್ಲಿ ಬಾಯ್ಲರ್ ಸ್ಪೋಟಿಸಿ ಮೂವರು ಕಾರ್ಮಿಕರ ಗಂಭೀರವಾಗಿ ಗಾಯಗೊಂಡಿದ್ದ ಘಟನೆ ಕೆಲದಿನಗಳ ಹಿಂದೆ ನಡೆದಿತ್ತು. ಬಾಲ್ ಫಾರ್ಮಾ ಕೆಮಿಕಲ್ ಕಾರ್ಖಾನೆಯ ಎರಡನೇ ಸೆಕ್ಟರ್ನಲ್ಲಿ ಬಾಯ್ಲರ್ ಒತ್ತಡ ಹೆಚ್ಚಾದಾಗ ಡಿಸ್ಚಾರ್ಜ್ ಮಾಡಬೇಕಾಗಿತ್ತು. ಆದರೆ, ಪ್ರೆಸರ್ ಡಿಸ್ಚಾರ್ಜ್ ಮಾಡದ ಕಾರಣ ಏಕಾಏಕಿ ಒತ್ತಡ ಹೆಚ್ಚಾಗಿ ಬಾಯ್ಲರ್ ಸಿಡಿದಿತ್ತು. ಕಾರ್ಮಿಕರಾದ ಮುರುಗನ್, ಪ್ರದೀಪ್ ಮತ್ತು ಕಿರಣ್ ಬಿ.ಸಿ.ಕೆಮಿಕಲ್ ಗಾಯಗೊಂಡಿದ್ದರು.
ಇದನ್ನೂ ಓದಿ:ಪಂಜಾಬ್‌ನಲ್ಲಿ ಕಾಲುವೆಗೆ ಬಿದ್ದ ಬಸ್; 8 ಪ್ರಯಾಣಿಕರು ಸಾವು