ಕೊಲಂಬೊ: ದ್ವೀಪರಾಷ್ಟ್ರ ಶ್ರೀಲಂಕಾದ ಆರ್ಥಿಕತೆಯು ಪಾತಾಳಕ್ಕೆ ಕುಸಿದಿದ್ದು, ಆಹಾರ ಅಥವಾ ಇಂಧನ ಖರೀದಿಸಲು ದೇಶದ ಬಳಿ ದುಡ್ಡೇ ಇಲ್ಲ ಎಂದು ಕಳೆದ ತಿಂಗಳಾಂತ್ಯದಲ್ಲಿ ಸ್ವತಃ ಶ್ರೀಲಂಕಾ ಪ್ರಧಾನ ಮಂತ್ರಿಯೇ ಹೇಳಿದ್ದರು. ದಿನನಿತ್ಯದ ಅಗತ್ಯ ವಸ್ತುಗಳ ಆಮದಿಗೆ ಹಣಕಾಸು ಇಲ್ಲದಿರುವುದು ಮತ್ತು ತೆಗೆದುಕೊಂಡ ಅಂತಾರಾಷ್ಟ್ರೀಯ ಸಾಲಗಳ ಇಎಂಐ ಕಟ್ಟಲಾಗದಿರುವ ಪರಿಸ್ಥಿತಿಗಳಲ್ಲಿರುವ ಪುಟ್ಟ ದೇಶ, ಸಹಾಯ ಮಾಡುವಂತೆ ನೆರೆಯ ಭಾರತ, ಚೀನಾ ಹಾಗೂ ಅಂತಾರಾಷ್ಟ್ರೀಯ ಹಣಕಾಸು ನಿಧಿಗಳಿಗೆ ಮನವಿ ಮಾಡಿದೆ.
ಮೇ ನಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ರನಿಲ್ ವಿಕ್ರಮಸಿಂಘೆ, ಶ್ರೀಲಂಕಾದ ಆರ್ಥಿಕತೆಯು ಪಾತಾಳಕ್ಕೆ ಕುಸಿದಿದೆ ಎಂದಿದ್ದರು. ಮೊನ್ನೆಯ ಶನಿವಾರದಂದು ಅಧ್ಯಕ್ಷ ಗೋಟಬಯಾ ರಾಜಪಕ್ಸ ಮತ್ತು ಪ್ರಧಾನಿ ರನಿಲ್ ವಿಕ್ರಮಸಿಂಘೆ ಇಬ್ಬರೂ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಲು ಒಪ್ಪಿದ್ದರು. ತಿನ್ನಲು ಆಹಾರವಿಲ್ಲದೆ, ವಾಹನಗಳಿಗೆ ಪೆಟ್ರೋಲ್ ಇಲ್ಲದೆ ಭಾರಿ ರೊಚ್ಚಿಗೆದ್ದ ಶ್ರೀಲಂಕನ್ನರು, ಪ್ರಧಾನಿ ಹಾಗೂ ಅಧ್ಯಕ್ಷರ ಸರ್ಕಾರಿ ನಿವಾಸಗಳಿಗೆ ನುಗ್ಗಿ ಕೋಲಾಹಲವೆಬ್ಬಿಸಿದ್ದರಿಂದ ಇಬ್ಬರಿಗೂ ರಾಜೀನಾಮೆ ಕೊಡದೇ ಗತ್ಯಂತರವಿರಲಿಲ್ಲ.
ಆಹಾರ ಪದಾರ್ಥಗಳ ಕೊರತೆಯಿಂದ ಎಷ್ಟೋ ಜನ ಒಪ್ಪೊತ್ತಿನ ಊಟವನ್ನೂ ಬಿಡುವ ಸ್ಥಿತಿಗೆ ತಲುಪಿದ್ದಾರೆ. ಇನ್ನು ದಿನಗಟ್ಟಲೆ ಕ್ಯೂನಲ್ಲಿ ನಿಂತರೂ ಪೆಟ್ರೋಲ್, ಡೀಸೆಲ್ ಮಾತ್ರ ಸಿಗುತ್ತಿಲ್ಲ. ವೇಗವಾಗಿ ಬೆಳೆಯುತ್ತಿದ್ದ ಆರ್ಥಿಕತೆ ಹಾಗೂ ನೆಮ್ಮದಿಯಿಂದ ಜೀವಿಸುತ್ತಿದ್ದ ಮಧ್ಯಮ ವರ್ಗದವರನ್ನೇ ಹೆಚ್ಚಾಗಿ ಹೊಂದಿದ್ದ ದೇಶಕ್ಕೆ ಈಗಿನ ಸಂಕಷ್ಟದ ಸ್ಥಿತಿಯು ಬರಸಿಡಿಲಿನಂತೆ ಎರಗಿದೆ.
1. ಅದೆಷ್ಟು ತೀವ್ರವಾಗಿದೆ ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು?:ಶ್ರೀಲಂಕಾ ಸರ್ಕಾರವು 51 ಬಿಲಿಯನ್ ಡಾಲರ್ ಸಾಲ ಹೊಂದಿದ್ದು, ಇದರ ಮೇಲಿನ ಬಡ್ಡಿಯನ್ನೇ ಪಾವತಿಸಲಾಗುತ್ತಿಲ್ಲ. ಇನ್ನು ಸಾಲದ ಅಸಲು ಪಾವತಿಸುವುದು ದೂರದ ಮಾತು. ಕೊರೊನಾ ಅಲೆ ಹಾಗೂ 2019ರಲ್ಲಿ ದೇಶದಲ್ಲಿ ನಡೆದ ಭಯೋತ್ಪಾದಕ ದಾಳಿಗಳ ಕಾರಣದಿಂದ ದೇಶದ ಆರ್ಥಿಕತೆಯ ಬೆನ್ನೆಲುಬಾಗಿದ್ದ ಪ್ರವಾಸೋದ್ಯಮ ಇನ್ನಿಲ್ಲದಂತೆ ನೆಲಕಚ್ಚಿದೆ. ಶ್ರೀಲಂಕಾದ ಕರೆನ್ಸಿಯು ಶೇ 80 ರಷ್ಟು ಕುಸಿದಿರುವುದರಿಂದ ಆಮದು ಮತ್ತಷ್ಟು ದುಬಾರಿಯಾಗಿದೆ. ಹಣದುಬ್ಬರವು ಅಂಕೆಗೆ ಸಿಗದ ಮಟ್ಟಕ್ಕೆ ಏರಿಕೆಯಾಗಿದ್ದು, ಆಹಾರ ಪದಾರ್ಥಗಳ ಬೆಲೆಗಳು ಶೇ 57 ರಷ್ಟು ಹೆಚ್ಚಾಗಿವೆ.
2. ಟಾಯ್ಲೆಟ್ ಪೇಪರೂ ಇಲ್ಲ!:ದೇಶವು ಸಂಪೂರ್ಣ ದಿವಾಳಿಯಾಗಿದ್ದು, ಇಂಧನ, ಹಾಲು, ಗ್ಯಾಸ್ ಸೇರಿದಂತೆ ಯಾವುದನ್ನು ಖರೀದಿಸಲೂ ಸರ್ಕಾರದ ಬಳಿ ಹಣವಿಲ್ಲ. ಟಾಯ್ಲೆಟ್ ಪೇಪರ್ ಸಹ ಈಗ ಶ್ರೀಲಂಕಾದಲ್ಲಿ ಸಿಗುತ್ತಿಲ್ಲ ಎಂದರೆ ಅಲ್ಲಿನ ಪರಿಸ್ಥಿತಿ ಊಹಿಸಬಹುದು. ಇಂಥ ಪರಿಸ್ಥಿತಿಯಲ್ಲಿ ಹೊರಗಿನಿಂದ ನೆರವು ಸಿಗುವುದು ಸಹ ಕಷ್ಟದ ಮಾತಾಗಿದೆ.
3. ಹಣಕಾಸು ನೆರವು ಬಂದ್:ಅಂತಾರಾಷ್ಟ್ರೀಯ ಹಣಕಾಸು ನಿಧಿ ಅಥವಾ ವಿಶ್ವ ಬ್ಯಾಂಕ್ಗಳು ಶ್ರೀಲಂಕಾಗೆ ಹಣಕಾಸು ನೆರವು ನೀಡುವುದಾದಲ್ಲಿ, ಅಂಥ ನೆರವಿನ ಬಳಕೆಗೆ ಕಠಿಣ ಷರತ್ತುಗಳನ್ನು ವಿಧಿಸಬೇಕು ಮತ್ತು ನೆರವಿನ ರೂಪದಲ್ಲಿ ನೀಡಲಾದ ಹಣ ದುರುಪಯೋಗವಾಗದಂತೆ ತಡೆಯಬೇಕೆಂದು ವಾಶಿಂಗ್ಟನ್ನ ಸೆಂಟರ್ ಫಾರ್ ಗ್ಲೋಬಲ್ ಡೆವಲಪ್ಮೆಂಟ್ನ ಆರ್ಥಿಕ ತಜ್ಞೆ ಅನಿತ್ ಮುಖರ್ಜಿ ಹೇಳುತ್ತಾರೆ. ಶ್ರೀಲಂಕಾ ವಿಶ್ವದ ಅತ್ಯಂತ ಹೆಚ್ಚು ಹಡಗುಗಳು ಸಂಚರಿಸುವ ಮಾರ್ಗದಲ್ಲಿನ ಪ್ರಮುಖ ಕೇಂದ್ರವಾಗಿರುವುದರಿಂದ ಈ ದೇಶ ಕುಸಿತವಾಗದಂತೆ ನೋಡಿಕೊಳ್ಳುವುದು ಅಗತ್ಯ ಎನ್ನುತ್ತಾರೆ ಮುಖರ್ಜಿ.
4. ಸದ್ಯ ಜನಸಾಮಾನ್ಯರ ಸ್ಥಿತಿ ಹೇಗಿದೆ?:ಉಷ್ಣವಲಯದಲ್ಲಿರುವ ಶ್ರೀಲಂಕಾದಲ್ಲಿ ಸಾಮಾನ್ಯವಾಗಿ ಯಾವತ್ತೂ ಆಹಾರದ ಕೊರತೆಯಾಗಿರಲಿಲ್ಲ. ಆದರೆ, ಈಗ ಜನ ಜನರು ಹಸಿವಿನಿಂದ ಬಳಲುತ್ತಿದ್ದಾರೆ. ದೇಶದ ಪ್ರತಿ 10 ಕುಟುಂಬಗಳಲ್ಲಿ ಸುಮಾರು ಒಂಬತ್ತು ಕುಟುಂಬದವರು ಊಟವನ್ನು ಬಿಡುತ್ತಿದ್ದಾರೆ ಅಥವಾ ಇರುವ ಆಹಾರ ಇನ್ನಷ್ಟು ದಿನಗಳಿಗಾಗಲಿ ಎಂಬ ಕಾರಣದಿಂದ ಊಟ ಕಡಿಮೆ ಮಾಡುತ್ತಿದ್ದಾರೆ. ದೇಶದ ಸುಮಾರು 3 ಮಿಲಿಯನ್ ಜನರು ಸದ್ಯ ತುರ್ತು ಮಾನವೀಯ ನೆರವು ಪಡೆಯುತ್ತಿದ್ದಾರೆ. ತುರ್ತು ವೈದ್ಯಕೀಯ ಸೇವೆ ನೀಡಲು ಬಹುತೇಕ ವೈದ್ಯರು ಸೋಶಿಯಲ್ ಮೀಡಿಯಾಗಳನ್ನು ಅವಲಂಬಿಸಿದ್ದಾರೆ.
5. ತಮ್ಮ ಆಹಾರ ತಾವೇ ಬೆಳೆದುಕೊಳ್ಳಬೇಕಂತೆ:ಕೆಲಸ ಹುಡುಕಿಕೊಂಡು ಬೇರೆ ದೇಶಗಳಿಗೆ ಹೋಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸರ್ಕಾರಿ ನೌಕರರು ತಮ್ಮ ಆಹಾರವನ್ನು ತಾವೇ ಬೆಳೆದುಕೊಳ್ಳಲು ಸಾಧ್ಯವಾಗಲಿ ಎಂಬ ಕಾರಣದಿಂದ ಮುಂದಿನ ಮೂರು ತಿಂಗಳ ಕಾಲ ಅವರಿಗೆ ವಾರಕ್ಕೆ ಒಂದು ದಿನ ಹೆಚ್ಚುವರಿ ರಜೆ ನೀಡಲಾಗಿದೆ. ಒಟ್ಟಾರೆಯಾಗಿ ದೇಶದ ಪರಿಸ್ಥಿತಿ ಯಾವತ್ತು ಸುಧಾರಿಸಲಿದೆ ಎಂಬುದು ತಿಳಿಯದೇ ಜನ ದಂಗೆ ಏಳುತ್ತಿದ್ದಾರೆ.
6. ಆರ್ಥಿಕತೆ ಹಾಳಾಗಲು ಸಹೋದರರ ಪಾತ್ರ:ಕಳೆದ ಹಲವಾರು ದೇಶದಲ್ಲಿ ನಡೆದ ದುರಾಡಳಿತ ಮತ್ತು ಭ್ರಷ್ಟಾಚಾರದ ಕಾರಣದಿಂದ ಈ ಪರಿಸ್ಥಿತಿ ಎದುರಾಗಿದೆ ಎನುತ್ತಾರೆ ಆರ್ಥಿಕ ತಜ್ಞರು. ಅಧ್ಯಕ್ಷ ರಾಜಪಕ್ಷೆ ಮತ್ತು ಅವರ ಸಹೋದರ, ಮಾಜಿ ಪ್ರಧಾನ ಮಂತ್ರಿ ಮಹಿಂದಾ ರಾಜಪಕ್ಸ ಅವರಿಂದಲೇ ದೇಶಕ್ಕೆ ಈ ಸ್ಥಿತಿ ಎದುರಾಗಿರುವುದಾಗಿ ಬಹುತೇಕ ಶ್ರೀಲಂಕನ್ನರ ಅಭಿಪ್ರಾಯವಾಗಿದೆ. ದೇಶಾದ್ಯಂತ ಹಿಂಸಾತ್ಮಕ ಪ್ರತಿಭಟನೆಗಳು ಭುಗಿಲೆದ್ದ ನಂತರ ಪ್ರಧಾನಿ ಮಹಿಂದಾ ರಾಜಪಕ್ಷೆ ಜೂನ್ನಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
7. ಇಸ್ಲಾಮಿಕ್ ಉಗ್ರವಾದದ ಹೊಡೆತ:ಕಳೆದ ಹಲವಾರು ವರ್ಷಗಳಿಂದಲೂ ದೇಶದ ಆರ್ಥಿಕ ಸ್ಥಿತಿ ಹಾಳಾಗುತ್ತ ಬಂದಿದೆ. 2019ರಲ್ಲಿ ಈಸ್ಟರ್ ಹಬ್ಬದಂದು ಚರ್ಚ್ಗಳು ಮತ್ತು ಹೊಟೇಲ್ಗಳ ಮೇಲೆ ನಡೆದ ಇಸ್ಲಾಮಿಕ್ ಉಗ್ರವಾದಿಗಳ ಆತ್ಮಹತ್ಯಾ ದಾಳಿಯ ನಂತರ ದೇಶದ ಪ್ರವಾಸೋದ್ಯಕ್ಕೆ ದೊಡ್ಡ ಹೊಡೆತ ಬಿದ್ದಿತ್ತು. ದೇಶದ ಪ್ರಮುಖ ಆದಾಯ ಮೂಲವೇ ಇದರಿಂದ ನಿಂತು ಹೋಗಿತ್ತು. ಇದೇ ಸಮಯದಲ್ಲಿ ದೇಶದಲ್ಲಿ ನಡೆಯುತ್ತಿದ್ದ ಮೂಲಭೂತ ಸೌಕರ್ಯ ನಿರ್ಮಾಣಗಳ ಬೃಹತ್ ಯೋಜನೆಗಳಿಗೆ ಹೆಚ್ಚಿನ ಅಂತಾರಾಷ್ಟ್ರೀಯ ಸಾಲ ಪಡೆಯಬೇಕಾಯಿತು. ಈ ಸಮಯದಲ್ಲಿ ತೆರಿಗೆಗಳನ್ನು ಹೆಚ್ಚಿಸುವ ಮೂಲಕ ಖಜಾನೆ ತುಂಬಿಸುವ ಬದಲು ರಾಜಪಕ್ಷೆ ತೆರಿಗೆ ವಿನಾಯಿತಿಗಳನ್ನು ನೀಡಿ ಪ್ರಮಾದವೆಸಗಿದರು. ಇದೆಲ್ಲದರ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಶ್ರೀಲಂಕಾಗೆ ಮತ್ತಷ್ಟು ಹಣಕಾಸು ಹರಿದು ಬರದಂತೆ ಕ್ರಮ ತೆಗೆದುಕೊಂಡವು.
8. ವಿಚಿತ್ರ ನಿಯಮಗಳಿಂದ ಕಂಗೆಟ್ಟ ಕೃಷಿ ವಲಯ:ಏಪ್ರಿಲ್ 2021ರಲ್ಲಿ ರಾಜಪಕ್ಷೆ ದಿಢೀರಾಗಿ ರಸಗೊಬ್ಬರಗಳ ಆಮದನ್ನು ನಿಲ್ಲಿಸಿದರು. ಸಾವಯವ ಕೃಷಿಯ ಒತ್ತಡವು ಕೃಷಿಕರನ್ನು ಆಘಾತಕ್ಕೆ ತಳ್ಳಿತು ಹಾಗೂ ಇದರಿಂದ ಅಗತ್ಯ ಧಾನ್ಯಗಳ ಇಳುವರಿ ಭಾರಿ ಕುಂಠಿತವಾಯಿತು. ಇದರಿಂದ ಆಹಾರ ಪದಾರ್ಥಗಳ ಬೆಲೆಗಳು ಏರಲಾರಂಭಿಸಿದವು. ಇನ್ನು ವಿದೇಶಿ ವಿನಿಮಯದ ಸಂಗ್ರಹ ಉಳಿತಾಯ ಮಾಡುವ ಸಲುವಾಗಿ ಐಷಾರಾಮಿ ವಸ್ತುಗಳ ಆಮದನ್ನು ನಿಷೇಧಿಸಲಾಯಿತು. ಇದರ ಮಧ್ಯೆ ಉಕ್ರೇನ್ ಯುದ್ಧದಿಂದ ಇಂಧನ ಮತ್ತು ಆಹಾರ ಬೆಲೆಗಳು ಮತ್ತೂ ಜಾಸ್ತಿಯಾದವು. ಮೇ ತಿಂಗಳಲ್ಲಿ ಹಣದುಬ್ಬರವು ಶೇ 40 ರಷ್ಟು ಮತ್ತು ಆಹಾರ ಪದಾರ್ಥಗಳ ಬೆಲೆಗಳು ಶೇ 60 ರಷ್ಟು ಏರಿಕೆಯಾದವು.
9. ಮುಂದಿನ ದಾರಿ ಕಷ್ಟ:ಶ್ರೀಲಂಕಾ ಸರ್ಕಾರವು ಐಎಂಎಫ್ನೊಂದಿಗೆ ಬೇಲ್‌ಔಟ್ ಯೋಜನೆ ಕುರಿತು ಮಾತುಕತೆ ನಡೆಸುತ್ತಿದೆ ಮತ್ತು ಈ ಬೇಸಿಗೆಯ ನಂತರ ಈ ಬಗ್ಗೆ ಪ್ರಾಥಮಿಕ ಒಪ್ಪಂದ ಜಾರಿಯಾಗುವ ನಿರೀಕ್ಷೆಯಿದೆ ಎಂದು ವಿಕ್ರಮಸಿಂಘೆ ಹೇಳಿದ್ದಾರೆ. ಶ್ರೀಲಂಕಾ ಚೀನಾದಿಂದ ಕೂಡ ಹೆಚ್ಚಿನ ಸಹಾಯವನ್ನು ಕೋರಿದೆ. ಯುಎಸ್, ಜಪಾನ್ ಮತ್ತು ಆಸ್ಟ್ರೇಲಿಯಾದಂತಹ ಇತರ ಸರ್ಕಾರಗಳು ಕೆಲ ನೂರು ಮಿಲಿಯನ್ ಡಾಲರ್‌ಗಳನ್ನು ಸಹಾಯವಾಗಿ ಒದಗಿಸಿವೆ.