ಪಾಟ್ನಾ: ಮೋದಿ ಜತೆ ಜಿದ್ದಿಗೆ ಬಿದ್ದಿದ್ದ ನಿತೀಶ್ ಕುಮಾರ್ ಬಿಹಾರದಲ್ಲಿನ ರಾಜಕೀಯ ಅನಿವಾರ್ಯತೆಗೆ ಆರ್ಜೆಡಿ ಸಖ್ಯೆ ತೊರೆದು ಮತ್ತೆ ಬಿಜೆಪಿ ಮೈತ್ರಿಗೆ ಬಂದಿತ್ತು. ಇನ್ನು 2020 ರಲ್ಲಿ ಜೆಡಿಯು- ಬಿಜೆಪಿ ಮೈತ್ರಿಕೂಟ ಸರ್ಕಾರದ ನೇತೃತ್ವ ವಹಿಸಿರುವ ನಿತೀಶ್ - ಬಿಜೆಪಿ ಸಂಬಂಧ ಹಾಗೂ ಸ್ನೇಹ ಚರ್ಚಾ ವಿಷಯವಾಗಿ ಮಾರ್ಪಟ್ಟಿದೆ.
ಬಿಜೆಪಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ 77 ಸ್ಥಾನ ಪಡೆದು ಜೆಡಿಯುಗಿಂತ ಹೆಚ್ಚು ಸ್ಥಾನ ಪಡೆದರೂ ನಿತೀಶ್ ಕುಮಾರ್ ಅವರನ್ನೇ ಸಿಎಂ ಎಂದು ಘೋಷಣೆ ಮಾಡಿತ್ತು. ಅದರಂತೆ ಅವರೇ ಸಿಎಂ ಆಗಿ ಕಳೆದ ಮೂರುವರ್ಷಗಳಿಂದ ಅಧಿಕಾರ ನಡೆಸುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಜೆಡಿಯು ಗೆದ್ದಿದ್ದು ಕೇವಲ 44 ಸ್ಥಾನಗಳನ್ನು ಮಾತ್ರ.
ಹೀಗಾಗಿ 2020 ರ ಹಿಂದಿನ ಅವಧಿಯಲ್ಲಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಅತಿ ಹೆಚ್ಚು ಸ್ಥಾನ ಗೆದ್ದು ಬೀಗಿತ್ತು. ಆಗ ಬಿಜೆಪಿ - ಜೆಡಿಯು, ಆರ್ಜೆಡಿ ಮೈತ್ರಿಕೂಟದ ವಿರುದ್ಧ ಏಕಾಂಗಿಯಾಗಿ ಹೋರಾಟ ನಡೆಸಿತ್ತು. ಆದರೆ, 2020 ರಲ್ಲಿ ಮತ್ತೆ ನಿತೀಶ್ ಕುಮಾರ್ ಅವರ ನೇತೃತ್ವದಲ್ಲಿ ಮೈತ್ರಿ ಮಾಡಿಕೊಂಡು ಕಣಕ್ಕಿಳಿದಿತ್ತು. ಹಿಂದಿಗಿಂತ ಕಡಿಮೆ ಸ್ಥಾನ ಪಡೆದಿರುವುದರಿಂದ ನಿತೀಶ್ ಕುಮಾರ್ ಸಿಎಂ ಆಗಿದ್ದರೂ ಅವರ ಪಕ್ಷದ ಸದ್ಯಸ್ಯರು ಕಡಿಮೆ ಇರುವುದರಿಂದ ಕ್ಯಾಬಿನೆಟ್ನಲ್ಲಿ ಕಡಿಮೆ ಸ್ಥಾನ ಪಡೆದುಕೊಂಡಿದ್ದು, ಬಿಜೆಪಿಗೆ ಹೆಚ್ಚಿನ ಸಚಿವ ಸ್ಥಾನಗಳನ್ನು ಬಿಟ್ಟುಕೊಟ್ಟಿದೆ.
ಬಿಹಾರ ರಾಜಕೀಯ ಇತಿಹಾಸದಲ್ಲಿ ಇಬ್ಬರು ಉಪಮುಖ್ಯಮಂತ್ರಿಗಳ ಹೊರತಾಗಿ ಬಿಜೆಪಿಗೆ ಮೊದಲ ಬಾರಿಗೆ ಸ್ಪೀಕರ್ ಕುರ್ಚಿಯೂ ಸಿಕ್ಕಿದೆ. ಇಂತಹ ಪರಿಸ್ಥಿತಿಯಲ್ಲಿ ಜೆಡಿಯು ತನ್ನ ಅಸ್ಥಿತ್ವ ಉಳಿಸಿಕೊಳ್ಳಲು ಪರದಾಡುತ್ತಿದೆ.
ಅಹಿತಕರ ಮೈತ್ರಿ ಬಗ್ಗೆ ಜೆಡಿಯು ನಾಯಕರ ಬೇಸರ: ನಿತೀಶ್ ಕುಮಾರ್ ಅವರನ್ನು ವಿರೋಧಿಸುತ್ತಿರುವ ರಾಮ್ ವಿಲಾಸ್ ಪಾಸ್ವಾನ ಅವರ ಪುತ್ರ ಚಿರಾಗ್ ಪಾಸ್ವಾನ್, ಕಳೆದ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿ ಜೆಡಿಯುಗೆ ಹೊಡೆತ ನೀಡಿದ್ದರು. ಇದಕ್ಕೆ ಬಿಜೆಪಿಯ ಪರೋಕ್ಷ ಬೆಂಬಲ ಇತ್ತು. ಇದು ನಿತೀಶ್ ಅವರ ಮುನಿಸಿಗೆ ಕಾರಣ.
ಈ ಬಗ್ಗೆ ಮಾತನಾಡಿರುವ ಜೆಡಿಯು ನಾಯಕರೊಬ್ಬರು, ಎಲ್‌ಜೆಪಿಯ ಚಿರಾಗ್ ಪಾಸ್ವಾನ್ ಅವರಿಗೆ ಕುಮ್ಮಕ್ಕು ಕೊಟ್ಟಿದ್ದೇ ಬಿಜೆಪಿ, ಹೀಗಾಗಿಯೇ ಜೆಡಿಯುಗೆ ಕಡಿಮೆ ಸ್ಥಾನ ಬರುವಂತಾಯಿತು. ಇದು ನಮ್ಮ ನಾಯಕರಿಗೆ ಎಲ್ಲಕ್ಕಿಂತ ಹೆಚ್ಚು ಕಿರಿಕಿರಿ ಉಂಟುಮಾಡಿದೆ. ಏಕೆಂದರೆ ಚಿರಾಗ್‌ನಿಂದಾಗಿ ನಾವು ಬಿಹಾರದಲ್ಲಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದೇವೆ. ಇದೇ ಕಾರಣ ಜೆಡಿಯು - ಬಿಜೆಪಿ ಮೈತ್ರಿಯಲ್ಲಿ ಬಿರುಕಿಗೆ ಕಾರಣವಾಗಿದೆ. ಹೀಗಾಗಿ ಮತ್ತೊಮ್ಮೆ ಎನ್ಡಿಎದಿಂದ ಹೊರ ಬೀಳುವ ಬಗ್ಗೆ ಯೋಚಿಸಬೇಕಾದ ಪರಿಸ್ಥಿತಿಗೆ ಪಕ್ಷ ತಲುಪಿದೆ ಎಂದು ಹೆಸರು ಹೇಳಲಿಚ್ಚಿಸದ ಜೆಡಿಯು ನಾಯಕರೊಬ್ಬರು ಹೇಳಿದ್ದಾರೆ.
ನಿತೀಶ್ ದುರ್ಬಲಗೊಳಿಸಲು ಷಡ್ಯಂತ್ರ:ಬಿಹಾರದಲ್ಲಿನ ರಾಜಕೀಯ ಪರಿಸ್ಥಿತಿಯ ಬಗ್ಗೆ ಮಾತನಾಡಿರುವ ಜೆಡಿಯು ಅಧ್ಯಕ್ಷ ರಾಜೀವ್ ರಂಜನ್ ಅಲಿಯಾಸ್ ಲಲನ್ ಸಿಂಗ್, ನಿತೀಶ್ ಮತ್ತು ಪಕ್ಷವನ್ನು ಹಾಳುಮಾಡಲು ಯೋಜನೆ ರೂಪಿಸಲಾಗುತ್ತಿದೆ ಎಂದು ಸುಳಿವು ನೀಡಿದರು. ಮಿತ್ರ ಪಕ್ಷ ಬಿಜೆಪಿ ಹೆಸರು ಹೇಳದೇ ಈ ಬಾರಿಯೂ 'ಚಿರಾಗ್ ಮಾದರಿ' ಅನುಸರಿಸಲಾಗುತ್ತಿದೆ ಎಂಬ ಅಂಶದತ್ತ ಅವರು ಬೆರಳು ತೋರಿಸಿದರು. ಜೆಡಿಯು ತೊರೆದಿರುವ ಆರ್‌ಸಿಪಿ ಸಿಂಗ್, ಮತ್ತೊಬ್ಬ ಚಿರಾಗ್ ಎಂದು ಬಣ್ಣಿಸಿದರು. ಇದೇ ವೇಳೆ ಮಾತು ಮುಂದುವರೆಸಿದ ಅವರು, ನಿತೀಶ್ ಅವರನ್ನು ದುರ್ಬಲಗೊಳಿಸುವ ಷಡ್ಯಂತ್ರ ನಡೆಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.