ನವದೆಹಲಿ: ನಿಫಾ, ಕೋವಿಡ್ ಹಾವಳಿಯ ಬೆನ್ನಲ್ಲೇ ಕಾಣಿಸಿಕೊಂಡ ಮತ್ತೊಂದು ವೈರಸ್.. ಸೆಪ್ಟೆಂಬರ್ 5ರಂದು ಕೇರಳದಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತಾದರೂ, ಇದು ಮೊದಲ ಬಾರಿಗೆ ಕಂಡು ಬಂದಿದ್ದು, 2018ರಲ್ಲಿ, ನಂತರ 2019ರಲ್ಲೂ ಕೂಡಾ ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು. ಈಗ ಮತ್ತೊಮ್ಮೆ ಕೇರಳದ ಕೋಯಿಕ್ಕೋಡ್ನಲ್ಲಿ ಕಾಣಿಸಿಕೊಂಡು, ಕೋವಿಡ್ ಜೊತೆಗೆ ಜನರ ಪ್ರಾಣದ ಜೊತೆಗೆ ಚೆಲ್ಲಾಟವಾಡುತ್ತಿದೆ.
ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿರುವ ಕೇರಳದಲ್ಲೇ ನಿಫಾ ಕಾಣಿಸಿಕೊಂಡಿರುವುದು ಅಲ್ಲಿನ ಸರ್ಕಾರಕ್ಕೆ ಮತ್ತು ಕೇಂದ್ರ ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ಈವರೆಗೆ 22 ಮಂದಿ ನಿಫಾ ವೈರಸ್ ಸೋಂಕಿನ ಹಾವಳಿಗೆ ತುತ್ತಾಗಿ ಸಾವನ್ನಪ್ಪಿದ್ದಾರೆ.
ಇನ್ನೂ ನಿಗೂಢ.. ನಂಬಿಕೆಯಷ್ಟೇ..!
ಕೋಯಿಕ್ಕೋಡ್‌ನ ಪೆರಂಬ್ರಾದ ಮುಹಮ್ಮದ್ ಸಬಿತ್ 2018ರಲ್ಲಿ ನಿಫಾ ಸೋಂಕಿಗೆ ಬಲಿಯಾಗಿದ್ದರು. ಇದೇ ಮೊದಲ ಸಾವು ಪ್ರಕರಣ ಕೇರಳದಲ್ಲಿ ವರದಿಯಾಗಿತ್ತು. ನಂತರ ಸಬಿತ್ ಸಂಪರ್ಕಕ್ಕೆ ಬಂದವರಿಗೂ ಈ ಸೋಂಕು ಹರಡಿತ್ತು. ಅದು ಹೇಗೆ ಎಂಬುದು ಈಗಲೂ ನಿಗೂಢವಾಗಿದೆ. ಹಣ್ಣು ತಿನ್ನುವ ಬಾವಲಿಗಳು ನಿಫಾ ವೈರಸ್ನ ಮೂಲ ಮತ್ತು ಅವುಗಳೇ ನಿಫಾ ವೈರಸ್ ಹರಡಲು ಕಾರಣವೆಂದು ಈವರೆಗೂ ನಂಬಲಾಗಿದೆ.
ಇದೇ ನಂಬಿಕೆಯ ಆಧಾರದ ಮೇಲೆ ಮೊದಲು ಕೋಯಿಕ್ಕೋಡ್ ಪ್ರದೇಶದಲ್ಲಿ ಸಾಕಷ್ಟು ತಪಾಸಣೆ ನಡೆಸಲಾಯಿತು. ಕೆಲವು ಬಾವಲಿಗಳಲ್ಲಿ ನಿಫಾ ವೈರಸ್ ಪತ್ತೆಯಾಯಿತು. ಆದರ ಬಾವಲಿಗಳಿಂದಲೇ ನಿಫಾ ವೈರಸ್ ಮನುಷ್ಯರಿಗೆ ಹಬ್ಬಿದೆಯೇ ಅಥವಾ ಬೇರೆ ಮೂಲದಿಂದ ಮುನಷ್ಯರಿಗೆ ನಿಫಾ ವೈರಸ್ ಹಬ್ಬಿದೆಯೇ ಎಂಬುದು ಈಗಲೂ ಖಚಿತವಾಗಿಲ್ಲ.
ಮೊದಲ ನಿಫಾ ಸೋಂಕು ಸಾವು ಪ್ರಕರಣದ ಸಬಿತ್ ಅವರಿಂದ ಇತರಿಗೂ ಕೂಡಾ ನಿಫಾ ವೈರಸ್ ಹಬ್ಬಿತ್ತು. ಅವರನ್ನು ತಪಾಸಣೆ ಮಾಡಿ, ವೈರಸ್ ಮೂಲ ಪತ್ತೆ ಹಚ್ಚುವಷ್ಟರಲ್ಲಿ ಅವರೂ ಕೂಡಾ ಸಾವನ್ನಪ್ಪಿದ್ದರು. ಇದು ನಿಫಾ ವೈರಸ್ ಮೂಲ ಪತ್ತೆ ಹಚ್ಚುವ ಕ್ರಿಯೆ ಮತ್ತಷ್ಟು ಕಗ್ಗಂಟಾಗುವಂತೆ ಮಾಡಿತ್ತು.
ವರ್ಷದಲ್ಲಿ ಕೆಲವೊಮ್ಮೆ ಕಾಣಿಸಿಕೊಳ್ಳುವ ನಿಫಾ ವೈರಸ್ ಮಾನವನಿಗೆ ಹರಡುವ ಮೂಲದ ಕುರಿತು ಈವರೆಗೆ ಸಂಶೋಧನೆಗಳು ನಡೆಯುತ್ತಿವೆ. ಈ ವೈರಸ್ ವರ್ಷದಲ್ಲಿ ಕೆಲವು ಬಾರಿ ಮಾತ್ರ ಕಾಣಿಸಿಕೊಳ್ಳುವುದೇಕೆ ಎಂಬುದನ್ನೂ ಸಂಶೋಧನೆ ಮಾಡಲಾಗುತ್ತಿದೆ.
ನಿಫಾ ರೋಗಿಗೆ ಈ ಲಕ್ಷಣಗಳಿರುತ್ತವೆ..
ನಿಫಾ ವೈರಸ್ಗೆ ವ್ಯಕ್ತಿಯೊಬ್ಬ ತುತ್ತಾದರೆ, ಸಾಮಾನ್ಯವಾಗಿ ಇಂತಹ ಲಕ್ಷಣಗಳು ರೋಗಿಯಲ್ಲಿ ಕಂಡು ಬರುತ್ತವೆ. ಜ್ವರ, ತಲೆನೋವು ಮತ್ತು ತಲೆತಿರುಗುವಿಕೆ. ಕೆಮ್ಮು, ಹೊಟ್ಟೆ ನೋವು, ವಾಕರಿಕೆ, ವಾಂತಿ, ಸುಸ್ತು ಮತ್ತು ಮಸುಕಾದ ದೃಷ್ಟಿ ಇವುಗಳು ನಿಫಾ ರೋಗಿಯಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳಾಗಿವೆ.
ನಿಫಾ ಅಪಾಯಕಾರಿ ಯಾಕೆ ಗೊತ್ತಾ?
ಮೇಲಿನ ಲಕ್ಷಣಗಳನ್ನು ನೋಡಿದಾಗ ಸಾಮಾನ್ಯ ರೋಗ ಎನಿಸಬಹುದು. ಆದರೆ, ನಿಫಾ ತುಂಬಾ ಅಪಾಯಕಾರಿ. ನಿಫಾ ವೈರಸ್ ಕಾಣಿಸಿಕೊಂಡ ನಾಲ್ಕರಿಂದ 14 ದಿನದೊಳಗೆ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಕೆಲವು ಸಂದರ್ಭಗಳಲ್ಲಿ ನಿಫಾ ವೈರಸ್ ಶ್ವಾಸಕೋಸದ ಮೇಲೆ ದಾಳಿ ಮಾಡಲು 21 ದಿನ ಬೇಕಾಗಲೂಬಹುದು. ನಂತರ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ರೋಗ ಲಕ್ಷಣಗಳು ಕಾಣಿಸಿಕೊಂಡ ನಂತರ ಕೇವಲ ಒಂದು ಅಥವಾ ಎರಡು ದಿನಗಳಲ್ಲಿ ರೋಗಿ ಕೋಮಾಗೆ ಜಾರುತ್ತಾನೆ. ಏಕೆಂದರೆ ಶ್ವಾಸಕೋಸ ಮಾತ್ರವಲ್ಲ, ಮೆದುಳಿನ ಮೇಲೆಯೂ ನಿಫಾ ದಾಳಿ ಮಾಡುತ್ತದೆ. ಮತ್ತೊಂದು ಅಪಾಯಕಾರಿ ವಿಚಾರವೆಂದರೆ, ರೋಗ ಲಕ್ಷಣಗಳು ಕಾಣಿಸಿಕೊಂಡ ತಕ್ಷಣವೇ ನಿಫಾ, ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ ಹರಡಲು ಸಮರ್ಥವಾಗಿರುತ್ತದೆ.
ಹಣ್ಣು ತಿನ್ನುವ ಮೊದಲು..