ನವದೆಹಲಿ:2004 ರಿಂದೀಚೆಗೆ ನಡೆದ 4 ಲೋಕಸಭಾ ಚುನಾವಣೆ ಹಾಗೂ 127 ವಿಧಾನಸಭೆ ಚುನಾವಣೆಗಳಲ್ಲಿ ಎಲೆಕ್ಟ್ರಾನಿಕ್ ಮತಯಂತ್ರಗಳ ಮೂಲಕ ಮತದಾನ ನಡೆದಿದೆ. ಆದರೆ ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯಸಭೆಗಳ ಸದಸ್ಯರು ಮತ್ತು ವಿಧಾನ ಪರಿಷತ್ ಚುನಾವಣೆಗಳಲ್ಲಿ ಇವಿಎಂ ಬಳಸಲ್ಲ. ಮತಪತ್ರ ಹಾಗೂ ಬ್ಯಾಲೆಟ್ ಬಾಕ್ಸ್ ವಿಧಾನದಲ್ಲಿಯೇ ಈ ಚುನಾವಣೆಗಳು ನಡೆಯುವುದೇಕೆ?
ಇವಿಎಂಗಳು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಂತಹ ನೇರ ಚುನಾವಣೆಗಳಲ್ಲಿ ಮತಗಳನ್ನು ಒಟ್ಟುಗೂಡಿಸುವ ತಂತ್ರಜ್ಞಾನ ಆಧರಿಸಿ ಕೆಲಸ ಮಾಡುತ್ತವೆ. ಇದರಲ್ಲಿ ಮತದಾರರು ತಮ್ಮ ಆಯ್ಕೆಯ ಅಭ್ಯರ್ಥಿಯ ಹೆಸರಿನ ಮುಂದಿನ ಗುಂಡಿಯನ್ನು ಒತ್ತಿ ಮತ ಚಲಾಯಿಸುತ್ತಾರೆ ಹಾಗೂ ಗರಿಷ್ಠ ಸಂಖ್ಯೆಯ ಮತ ಗಳಿಸಿದವರನ್ನು ಚುನಾಯಿತ ಎಂದು ಘೋಷಿಸಲಾಗುತ್ತದೆ.
ಆದರೆ ರಾಷ್ಟ್ರಪತಿಗಳ ಚುನಾವಣೆಯಲ್ಲಿ ಅನುಪಾತ ಪ್ರಾತಿನಿಧ್ಯ ಆಧರಿತ ಒಂದೇ ವರ್ಗಾವಣೆ ಮತದ ವ್ಯವಸ್ಥೆಯಡಿ ಚುನಾವಣೆ ನಡೆಸಲಾಗುತ್ತದೆ. ಅನುಪಾತ ಪ್ರಾತಿನಿಧ್ಯ ಆಧರಿತ ಚುನಾವಣೆಯಲ್ಲಿ ಮತದಾರರೊಬ್ಬರು ಒಂದೇ ವರ್ಗಾವಣೆ ಮತದ ಮೂಲಕ, ಕಣದಲ್ಲಿರುವ ಅಷ್ಟೂ ಅಭ್ಯರ್ಥಿಗಳ ಪರವಾಗಿ, ತಮ್ಮ ಪ್ರಾಶಸ್ತ್ಯದ ಮತ ಚಲಾಯಿಸಬಹುದು.
ಅಭ್ಯರ್ಥಿಗಳಿಗೆ ನೀಡುವ ಮತದ ಪ್ರಾಶಸ್ತ್ಯವನ್ನು ಗುರುತಿಸಲು ಮತದಾರನೋರ್ವ, ಆಯಾ ಅಭ್ಯರ್ಥಿಗಳ ಹೆಸರಿನ ಮುಂದೆ 1,2,3,4 ಹೀಗೆ ಅಂಕಿಗಳನ್ನು ಬರೆದು, ಆ ಮೂಲಕ ತಮ್ಮ ಹೆಚ್ಚು ಪ್ರಾಶಸ್ತ್ಯದ ಹಾಗೂ ಕಡಿಮೆ ಪ್ರಾಶಸ್ತ್ಯದ ಮತ ಚಲಾವಣೆ ಮಾಡಬಹುದು. ಮತಪತ್ರದಲ್ಲಿ ನೀಡಲಾಗಿರುವ ಕಾಲಂ ನಂಬರ್ 2 ರಲ್ಲಿ ಪ್ರಾಶಸ್ತ್ಯಗಳನ್ನು ಮಾರ್ಕ್ ಮಾಡಬಹುದು. ಹೀಗಾಗಿ ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಗಳಲ್ಲಿ ಇವಿಎಂ ಬಳಸಲು ಸಾಧ್ಯವಿಲ್ಲ. ಪ್ರಾಶಸ್ತ್ಯದ ಮತಗಳನ್ನು ಇವಿಎಂ ಗಳಲ್ಲಿ ಚಲಾಯಿಸಬೇಕಾದರೆ ಅದಕ್ಕಾಗಿ ಸಂಪೂರ್ಣ ವಿಭಿನ್ನವಾದ ಇವಿಎಂಗಳನ್ನು ವಿನ್ಯಾಸಗೊಳಿಸಬೇಕಾಗುತ್ತದೆ.
ಚುನಾವಣಾ ಆಯೋಗದ ತ್ರೈಮಾಸಿಕ ನಿಯತಕಾಲಿಕೆಯಾದ 'ಮೈ ವೋಟ್ ಮ್ಯಾಟರ್ಸ್'ನ ಆಗಸ್ಟ್, 2021 ರ ಸಂಚಿಕೆ ಪ್ರಕಾರ, 2004 ರಿಂದ ನಾಲ್ಕು ಲೋಕಸಭೆ ಮತ್ತು 127 ವಿಧಾನಸಭಾ ಚುನಾವಣೆಗಳಲ್ಲಿ ಇವಿಎಂಗಳನ್ನು ಬಳಸಲಾಗಿದೆ. ಚುನಾವಣಾ ಆಯೋಗದ ವೆಬ್‌ಸೈಟ್ ಪ್ರಕಾರ, 1977ರಲ್ಲಿ ಮೊದಲ ಬಾರಿಗೆ ಹೈದರಾಬಾದಿನ ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ECIL) ಕಂಪನಿಗೆ ಇವಿಎಂ ಗಳನ್ನು ವಿನ್ಯಾಸ ಮತ್ತು ಅಭಿವೃದ್ಧಿಪಡಿಸುವ ಕಾರ್ಯವನ್ನು ವಹಿಸಲಾಗಿತ್ತು.