ನವದೆಹಲಿ :ಖಾದ್ಯ ತೈಲಗಳ ಪೂರೈಕೆ ಬಿಕ್ಕಟ್ಟಿನಿಂದ ತತ್ತರಿಸಿರುವ ವಿಶ್ವ ಮಾರುಕಟ್ಟೆಗೆ, ಕಚ್ಚಾ ತಾಳೆ ಎಣ್ಣೆ ರಫ್ತಿನ ಮೇಲಿನ ನಿಷೇಧವನ್ನು ತೆಗೆದು ಹಾಕುವ ಇಂಡೋನೇಷ್ಯಾ ನಿರ್ಧಾರವು ದೊಡ್ಡ ಪರಿಹಾರವಾಗಿದೆ. ವಿಶ್ವದಲ್ಲಿ ಅತಿ ಹೆಚ್ಚು ತಾಳೆ ಎಣ್ಣೆಯನ್ನು ಆಮದು ಮಾಡಿಕೊಳ್ಳುವ ಭಾರತದಂತಹ ದೇಶಕ್ಕೆ ಇದು ತುಂಬಾನೇ ಪ್ರಯೋಜನಕಾರಿಯಾಗಿದೆ. ಈ ವರ್ಷದ ಏಪ್ರಿಲ್ 28ರಿಂದ ತಾಳೆ ಎಣ್ಣೆ ರಫ್ತು ಮಾಡುವುದನ್ನು ಇಂಡೋನೇಷ್ಯಾ ನಿರ್ಬಂಧಿಸಿತ್ತು.
ಇಂಡೋನೇಷ್ಯಾ ವಿಶ್ವದಲ್ಲಿಯೇ ಅತಿದೊಡ್ಡ ಕಚ್ಚಾ ತಾಳೆ ಎಣ್ಣೆಯನ್ನು ಉತ್ಪಾದಿಸುವ ಮತ್ತು ರಫ್ತು ಮಾಡುವ ದೇಶವಾಗಿದೆ. ಇದು ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿ ಪ್ರಮುಖ ಅಡುಗೆ ತೈಲವಾಗಿದೆ. ಭಾರತವು ತಿಂಗಳಿಗೆ 1 ರಿಂದ 1.1 ಮಿಲಿಯನ್ ಟನ್ಗಳಷ್ಟು ಖಾದ್ಯ ತೈಲಗಳನ್ನು ಆಮದು ಮಾಡಿಕೊಳ್ಳುತ್ತದೆ. ಒಂದು ವರ್ಷದಲ್ಲಿ 13 ರಿಂದ14 ಮಿಲಿಯನ್ ಟನ್ಗಳಷ್ಟು ಆಮದು ಮಾಡಿಕೊಳ್ಳುತ್ತದೆ. ಭಾರತದ ಖಾದ್ಯ ತೈಲ ಆಮದುಗಳಲ್ಲಿ ಪಾಮ್ ಆಯಿಲ್ ಆಮದು ಶೇ. 60ಕ್ಕಿಂತ ಹೆಚ್ಚಿದೆ.