ನವದೆಹಲಿ : ಭಾರತದ ಇತಿಹಾಸದಲ್ಲಿ 1975, ಜೂನ್ 25 ಮರೆಯಲಾಗದ ದಿನ. ಯಾಕೆಂದರೆ, ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದರು. ಈ ತುರ್ತು ಪರಿಸ್ಥಿತಿ 21 ತಿಂಗಳುಗಳ ಕಾಲ ಜಾರಿಯಲ್ಲಿದ್ದು, ಮಾರ್ಚ್ 21, 1977ರವರೆಗೆ ಮುಂದುವರಿಯಿತು. ಇದೀಗ ತುರ್ತು ಪರಿಸ್ಥಿತಿ 48ನೇ ವರ್ಷಾಚರಣೆಯನ್ನು ದೇಶವು ಆಚರಿಸಿದ್ದು, ಯಾವ ವಿಧಿ ಅಡಿ ತುರ್ತು ಪರಿಸ್ಥಿತಿ ಹೇರಲಾಯಿತು ಎಂಬ ಮಾಹಿತಿ ಇಲ್ಲಿದೆ ನೋಡಿ.
ಸಂವಿಧಾನದ 352 ನೇ ವಿಧಿಯ ಅಡಿಯಲ್ಲಿ ಅಂದಿನ ರಾಷ್ಟ್ರಪತಿಗಳ ಒಪ್ಪಿಗೆ ಪಡೆದು ಆಂತರಿಕ ಕಠಿಣ ಪರಿಸ್ಥಿತಿ ಕಾರಣ ನೀಡಿ ಭಾರತದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿಸಲಾಯಿತು. ದೇಶದಲ್ಲಿ ಹೀಗೆ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿರುವುದು ಇದೇ ಮೊದಲೇನೂ ಅಲ್ಲ. 1962 ರ ಭಾರತ-ಚೀನಾ ಯುದ್ಧದ ಸಮಯದಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಮೊದಲು ಬಾರಿಗೆ ಘೋಷಿಸಲಾಗಿತ್ತು. ಆನಂತರ, 1971 ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಎರಡನೇ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿತ್ತು. ಈ ಸಂದರ್ಭದಲ್ಲೇ ಪಾಕಿಸ್ತಾನದಿಂದ ಬೇರ್ಪಟ್ಟ ಬಾಂಗ್ಲಾ, ಬಾಂಗ್ಲಾದೇಶ ಎಂಬ ಹೊಸ ರಾಷ್ಟ್ರ ರಚನೆಗೆ ಕಾರಣವಾಯಿತು.
ಇನ್ನು ಈ ಸಂದರ್ಭದಲ್ಲೇ ಸಮಾಜವಾದಿ ಪಕ್ಷದ ನಾಯಕ ಜಯಪ್ರಕಾಶ ನಾರಾಯಣ ಅವರು ಅಂದು ಬೃಹತ್ ರ್‍ಯಾಲಿಗಳನ್ನು ನಡೆಸುತ್ತಿದ್ದರು. ಇಂದಿರಾ ಗಾಂಧಿ ಆಡಳಿತ ವಿರುದ್ಧ ತೀವ್ರ ಪ್ರಚಾರ ಮಾಡುತ್ತಿದ್ದರು. ಆಡಳಿತ ವಿರುದ್ಧ ದಂಗೆ ಏಳಬೇಕು, ಸರ್ಕಾರದ ಆದೇಶ ಪಾಲಿಸಬಾರದು ಎಂದು ಪೊಲೀಸರಿಗೆ, ಸೈನ್ಯಕ್ಕೆ ಕರೆ ನೀಡುತ್ತಿದ್ದರು. ನಾರಾಯಣ ಕರೆಗೆ ಓಗೊಟ್ಟು ದೇಶದ ಜನರು ತಿರುಗಿ ಬೀಳುತ್ತಾರೆ ಎಂದು ಭಾವಿಸಿದ ಇಂದಿರಾ ಗಾಂಧಿ, ರಾಷ್ಟ್ರಪತಿಗಳ ಜೊತೆ ಚರ್ಚೆ ನಡೆಸಿ ಅವರಿಂದ ಅಧಿಕೃತ ಒಪ್ಪಿಗೆ ಪಡೆದು 1975, ಜೂನ್ 25 ರಂದು ತುರ್ತು ಪರಿಸ್ಥಿತಿಯನ್ನು ಜಾರಿಗೆ ತಂದೇ ಬಿಟ್ಟರು.
ಇಂದಿರಾ ಗಾಂಧಿ ವಿರುದ್ಧ ಕಠಿಣ ಕ್ರಮ:12 ಜೂನ್ 1975 ರಂದು ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಜಗಮೋಹನ್‌ಲಾಲ್ ಸಿನ್ಹಾ ಅವರು ತಮ್ಮ ಚುನಾವಣಾ ಪ್ರಚಾರಕ್ಕಾಗಿ ಸರ್ಕಾರಿ ಯಂತ್ರಗಳನ್ನ ದುರುಪಯೋಗ ಪಡಿಸಿಕೊಂಡ ಆರೋಪದಲ್ಲಿ ಪ್ರಧಾನಿ ಅವರನ್ನು ತಪ್ಪಿತಸ್ಥರೆಂದು ಘೋಷಿಸಿಸಿದ್ದರು. ನ್ಯಾಯಾಲಯವು ಆ ಚುನಾವಣೆಯನ್ನು ಅನೂರ್ಜಿತ ಎಂದು ಘೋಷಿಸಿತು.ಜೊತೆಗೆ, ಲೋಕಸಭೆಯಲ್ಲಿ ಅವರ ಸಂಸದ ಸ್ಥಾನದಿಂದಲೂ ಇಂದಿರಾಗಾಂಧಿ ಅವರನ್ನು ಪದಚ್ಯುತಗೊಳಿಸಿ ಆದೇಶಿಸಿತ್ತು.
ಅಲಹಾಬಾದ್ ಹೈಕೋರ್ಟ್ನ ತೀರ್ಪು ಪ್ರಶ್ನಿಸಿ ಇಂದಿರಾಗಾಂಧಿ, ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಅಲಹಾಬಾದ್ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿತ್ತು. ಇದರಿಂದ ಕೆರಳಿದ ಇಂದಿರಾಗಾಂಧಿ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಿದ್ದರು.