ಕಾಸರಗೋಡು (ಕೇರಳ):ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ಎಂಜಿಎನ್‌ಆರ್‌ಇಜಿಎ) ಯೋಜನೆಯ ಕೂಲಿ ಕಾರ್ಮಿಕರಿಗೆ ಅವಧಿ ಮೀರಿದ ಮಾತ್ರೆಗಳನ್ನು ನೀಡಲಾಗಿದೆ ಎಂಬ ಆರೋಪ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಕೇಳಿ ಬಂದಿದೆ. ಈ ಮಾತ್ರೆಗಳನ್ನು ಸೇವಿಸಿದ ಮನರೇಗಾ ಕಾರ್ಮಿಕರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಆದರೆ, ಅದೃಷ್ಟವಶಾತ್ ಇದುವರೆಗೆ ಯಾರ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳು ಕಂಡು ಬಂದಿಲ್ಲ.
ಇಲ್ಲಿನ ಕಿನಾನೂರು-ಕರಿಂತಲಂ ಪಂಚಾಯಿತಿಯ ವಾರ್ಡ್ ನಂ.8ರ ಮಾಲೂರ್ಕಾಯಂನಲ್ಲಿ ಜುಲೈ 6ರಂದು ಹಾಗೂ 7ರಂದು ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸಕ್ಕೆ ಬಂದ ನೂರಾರು ಕಾರ್ಮಿಕರಿಗೆ ಅವಧಿ ಮೀರಿದ ಡಾಕ್ಸಿಸೈಕ್ಲಿನ್ ಮಾತ್ರೆಗಳನ್ನು ವಿತರಿಸಲಾಗಿದೆ. ಆದರೆ, ಈ ಮಾತ್ರೆಗಳು ಅವಧಿಯು ಕಳೆದ ಮೇನಲ್ಲಿ ಕೊನೆಗೊಂಡಿತ್ತು ಎಂದು ವರದಿಯಾಗಿದೆ.
ಮನರೇಗಾ ಕಾರ್ಮಿಕರಿಗೆ ವಿತರಿಸಲೆಂದು ರೋಗ ನಿರೋಧಕ ಮಾತ್ರೆಗಳನ್ನು ಎಂಎನ್‌ಆರ್‌ಇಜಿಎ ಕಾರ್ಯಕ್ರಮದ ಮುಂಚೂಣಿ ಮೇಲ್ವಿಚಾರಕರು ಜುಲೈ 6ರಂದು ಔಷಧಾಲಯದಿಂದ ಖರೀದಿಸಿದ್ದರು. ಅಂದು ಸಂಜೆ ಮತ್ತು ಮರು ದಿನ ಕೂಲಿ ಕಾರ್ಮಿಕರಿಗೆ ಆ ಮಾತ್ರೆಗಳನ್ನು ವಿತರಿಸಿದ್ದಾರೆ. ಇವರನ್ನು ನಂಬಿ ಮಾತ್ರೆ ಎಲ್ಲ ಕಾರ್ಮಿಕರು ಮಾತ್ರೆಗಳನ್ನು ಸೇವಿಸಿದ್ದಾರೆ. ಆದರೆ, ಮಾತ್ರೆಗಳ ಅವಧಿ ಮೀರಿದ ವಿಷಯ ತಿಳಿದು ತೀವ್ರ ಆತಂಕದಲ್ಲಿದ್ದಾರೆ.
ಈ ಮಾಹಿತಿ ಹೊರಬೀಳುತ್ತಿದ್ದಂತೆ ಕಾರ್ಮಿಕರು ಆಕ್ರೋಶ ಸಹ ವ್ಯಕ್ತಪಡಿಸಿದ್ದಾರೆ. ಅಲ್ಲದೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ (ಡಿಎಂಒ)ಗೆ ದೂರು ಸಲ್ಲಿಸಿದ್ದಾರೆ. ಈ ದೂರನ್ನು ಸ್ವೀಕರಿಸಿದ ಕಾಸರಗೋಡು ಡಿಎಂಒ ಘಟನೆಯ ಕುರಿತು ತನಿಖೆಗೆ ಆದೇಶಿಸಿದ್ದಾರೆ. ಉಪ ಡಿಎಂಒ ಡಾ.ಗೀತಾ ಅವರಿಗೆ ವಿಚಾರಣೆಯ ಹೊಣೆ ವಹಿಸಲಾಗಿದೆ.