ಕರ್ನಾಟಕ

karnataka

ETV Bharat / bharat

'2001ರ ಭದ್ರತಾ ಉಲ್ಲಂಘನೆಗೆ ಈ ಘಟನೆ ಹೋಲಿಸಲಾಗುವುದಿಲ್ಲ': ಮಾಜಿ ರಾ ಅಧಿಕಾರಿ ಆರ್‌ಕೆ ಯಾದವ್

ಬುಧವಾರದ ಸಂಸತ್ತಿನ ಭದ್ರತಾ ಉಲ್ಲಂಘನೆಯ ಕುರಿತು ಮಾಜಿ ರಾ ಅಧಿಕಾರಿ ಆರ್‌ಕೆ ಯಾದವ್ ಈಟಿವಿ ಭಾರತದ ಸೌರಭ್ ಶರ್ಮಾ ಅವರೊಂದಿಗೆ ಮಾತನಾಡಿದರು. ಈ ವೇಳೆ 'ಇಂದಿನ ಘಟನೆ 2001ರ ದಾಳಿಗೆ ಹೋಲಿಸಲಾಗುವುದಿಲ್ಲ' ಎಂದಿದ್ದಾರೆ.

parliament security breach
parliament security breach

By ETV Bharat Karnataka Team

Published : Dec 13, 2023, 10:33 PM IST

ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನದ ವೇಳೆ ಇಬ್ಬರು ಗ್ಯಾಲರಿಯಿಂದ ಜಿಗಿದು ಹಳದಿ ಬಣ್ಣದ ಸ್ಟ್ರೇ ಮಾಡಿದ ಘಟನೆ ಬುಧವಾರ ನಡೆಯಿತು. ಇದನ್ನು ಭದ್ರತಾ ಲೋಪ ಎಂದು ತಜ್ಞರು ಕರೆದಿದ್ದಾರೆ ಮತ್ತು ಹೊಸ ಸಂಸತ್ತಿನ ಕಟ್ಟಡದಲ್ಲಿನ ಕಣ್ಗಾವಲು ವ್ಯವಸ್ಥೆ ಬಗ್ಗೆ ಈಗ ಪ್ರಶ್ನೆಗಳು ಎಲ್ಲೆಡೆ ಕೇಳಿ ಬರುತ್ತಿದೆ.

ಈಟಿವಿ ಭಾರತದ ಜೊತೆಗೆ ಮಾತನಾಡಿದ ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗ (R&AW) ಮಾಜಿ ಅಧಿಕಾರಿ ಆರ್‌ಕೆ ಯಾದವ್,"ಇದು ಭದ್ರತಾ ಉಲ್ಲಂಘನೆಯಾಗಿದೆ. ಯಾರಾದರೂ ಅಂತಹ ಹೊಗೆ ಅನಿಲವನ್ನು ಹೊತ್ತುಕೊಂಡು ಸಂಸತ್ತಿಗೆ ಪ್ರವೇಶಿಸಬಹುದು ಎಂಬುದು ಆಶ್ಚರ್ಯಕರವಾಗಿದೆ. ಇಂತಹ ನಿರ್ಲಕ್ಷ್ಯದಿಂದ ಜನರನ್ನು ಸ್ಕ್ಯಾನ್ ಮಾಡಿರುವುದು ಭದ್ರತಾ ಸಿಬ್ಬಂದಿಯ ತಪ್ಪಾಗಿದೆ" ಎಂದಿದ್ದಾರೆ.

ಆದಾಗ್ಯೂ, ಈ ಘಟನೆಯನ್ನು 2001ರ ದಾಳಿಯೊಂದಿಗೆ ಹೋಲಿಸಲಾಗುವುದಿಲ್ಲ ಎಂದು ಯಾದವ್ ಹೇಳಿದರು. "ಇದನ್ನು ಮಾಡಿದ ಸಂಬಂಧಿತ ವ್ಯಕ್ತಿಗಳು ರಾಜಕೀಯ ಅಜೆಂಡಾವನ್ನು ಹೊಂದಿರಬಹುದು ಅಥವಾ ಅವರು ಸಂಸದರ ಗಮನವನ್ನು ನಿರ್ದಿಷ್ಟ ವಿಷಯದಿಂದ ಬೇರೆಡೆಗೆ ತಿರುಗಿಸಲು ಬಯಸಬಹುದು. ಇದನ್ನು 2001ರ ದಾಳಿಯೊಂದಿಗೆ ಹೋಲಿಸಲಾಗುವುದಿಲ್ಲ. ಏಕೆಂದರೆ ಅದು ಪಾಕಿಸ್ತಾನ ಪ್ರಾಯೋಜಿತವಾಗಿದೆ" ಎಂದು ಯಾದವ್ ಹೇಳಿದರು.

"ಇದು ಸಂಭವಿಸಿದ ಪ್ರದೇಶವು ಸಂದರ್ಶಕರಿಗೆ ಸಹ ಮುಕ್ತವಾಗಿದೆ. ಗ್ಯಾಲರಿ ಪ್ರದೇಶದಲ್ಲಿ ಯಾರಾದರೂ ಇದನ್ನು ಮಾಡಬಹುದು. ಆದ್ದರಿಂದ ಭವಿಷ್ಯದಲ್ಲಿ ಅಂತಹ ದುರ್ಘಟನೆಗಳನ್ನು ತಡೆಗಟ್ಟಲು ನಿರ್ದಿಷ್ಟ ಕ್ರಮಗಳನ್ನು ತೆಗೆದುಕೊಳ್ಳಬೇಕು" ಎಂದು ಅವರು ಇದೇ ವೇಳೆ ಸಲಹೆ ನೀಡಿದರು.

2001ರಲ್ಲಿ ಇದೇ ದಿನ ಸಂಸತ್ತಿನ ಮೇಲೆ ಭಯೋತ್ಪಾದಕ ದಾಳಿ ನಡೆದಿತ್ತು. ಇಂದು (ಬುಧವಾರ) ಶೂನ್ಯ ವೇಳೆಯಲ್ಲಿ ಇಬ್ಬರು ವ್ಯಕ್ತಿಗಳು ಸಾರ್ವಜನಿಕ ಗ್ಯಾಲರಿಯಿಂದ ಲೋಕಸಭೆಯ ಸಭಾಂಗಣಕ್ಕೆ ಜಿಗಿದರು ಮತ್ತು ಬಣ್ಣಗಳ ಎರಚುವ ಸ್ಪ್ರೇಯನ್ನು ಕೈಯಲ್ಲಿ ಹಿಡಿದುಕೊಂಡಿದ್ದರು. ಒಳಗೆ ಇಬ್ಬರು ಪ್ರವೇಶಿಸಿದ್ದರೆ ಹೊರಗಡೆ ಇಬ್ಬರು ಪ್ರತಿಭಟಿಸುತ್ತಿದ್ದರು. ಸಂಸತ್ತಿನ ಆವರಣದಲ್ಲಿ ಇಬ್ಬರನ್ನು ಮತ್ತು ಸಂಸತ್ತಿನ ಒಳಗೆ ಇಬ್ಬರು ಸೇರಿ ಒಟ್ಟು ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಲೋಕಸಭೆ ಕಲಾಪಕ್ಕೆ ನುಗ್ಗಿದ ಘಟನೆಯಲ್ಲಿ ಭಾಗಿಯಾಗಿರುವ ಇಬ್ಬರನ್ನು ಸಾಗರ್ ಶರ್ಮಾ ಮತ್ತು ಮನೋರಂಜನ್ ಎಂದು ಗುರುತಿಸಲಾಗಿದೆ. ಶರ್ಮಾ ಅವರು ಮೈಸೂರು ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಅವರ ಅತಿಥಿಯಾಗಿ ಸಂದರ್ಶಕರ ಗ್ಯಾಲರಿಗೆ ಬಂದಿದ್ದರು. ಸಂಸತ್ತಿನ ಹೊರಗೆ ಬಂಧನಕ್ಕೊಳಗಾದವರನ್ನು ನೀಲಂ ದೇವಿ ಮತ್ತು ಅಮೋಲ್ ಶಿಂಧೆ ಎಂದು ಗುರುತಿಸಲಾಗಿದೆ.

ವೀಕ್ಷಕರಿಗೆ ನಿರ್ಬಂಧ :ಈ ಘಟನೆಯಿಂದ ಪ್ರಸ್ತುತ ಕಲಾಪ ವೀಕ್ಷಣೆಗೆ ಸಾರ್ವಜನಿಕರಿಗೆ ಇದ್ದ ಅವಕಾಶವನ್ನು ರದ್ದು ಮಾಡಲಾಗಿದೆ. ಮುಂದಿನ ಆದೇಶದ ವರೆಗೆ ಸಾರ್ವಜನಿಕರ ಪ್ರವೇಶವನ್ನು ನಿಷೇಧ ಮಾಡಲಾಗಿದೆ.

ಆರು ಜನ ಪ್ರವೇಶಿಸುವ ಸಂಚು:ಲೋಕಸಭೆಯ ಕಲಾಪದ ವೇಳೆ ಸಂಸತ್ತಿಗೆ ಪ್ರವೇಶಿಸಲು ಆರು ಜನ ಮುಂಚಿತವಾಗಿ ಯೋಜನೆ ರೂಪಿಸಿದ್ದರು ಎಂದು ತಿಳಿದುಬಂದಿದೆ. ಒಟ್ಟು ಆರು ಜನರಲ್ಲಿ ಐವರು ಸಂಸತ್ತಿಗೆ ಬರುವ ಮೊದಲು ಗುರುಗ್ರಾಮ್‌ನಲ್ಲಿರುವ ವಿಕ್ರಮ್​ನ ನಿವಾಸದಲ್ಲಿ ತಂಗಿದ್ದರು. ತಮ್ಮ ಪ್ಲಾನ್​ ಪ್ರಕಾರ, ಎಲ್ಲ ಆರು ಮಂದಿ ಸಹ ಸಂಸತ್ತಿನ ಒಳಗೆ ಹೋಗಲು ಬಯಸಿದ್ದರು. ಆದರೆ, ಇಬ್ಬರಿಗೆ ಮಾತ್ರ ಪಾಸ್‌ಗಳು ಸಿಕ್ಕಿದ್ದವು ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ:ಆರು ಜನರಲ್ಲಿ ಇಬ್ಬರಿಗೆ ಮಾತ್ರ ಸಿಕ್ಕಿತ್ತು 'ಸಂಸತ್​' ಪಾಸ್​; ಸೋಷಿಯಲ್​ ಮೀಡಿಯಾದಲ್ಲೇ ಸಿದ್ಧವಾಗಿತ್ತು ಪ್ಲಾನ್​!

ABOUT THE AUTHOR

...view details