ಮುಂಬೈ(ಮಹಾರಾಷ್ಟ್ರ): ಸಣ್ಣ ಪುಟ್ಟ ಅಪರಾಧಗಳೂ ವ್ಯಕ್ತಿಯೊಬ್ಬನನ್ನು ಸಾಕಷ್ಟು ಇಕ್ಕಟ್ಟಿಗೆ ಸಿಲುಕಿಸಬಹುದು. ರೈಲಿನಲ್ಲಿ ಪ್ರಯಾಣಿಸುವಾಗ ಮಹಿಳೆಯ ಕೆನ್ನೆಗೆ ಮುತ್ತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನಿಗೆ ನ್ಯಾಯಾಲಯವೊಂದು ಒಂದು ವರ್ಷ ಕಠಿಣ ಶಿಕ್ಷೆ ಮತ್ತು 10 ಸಾವಿರ ರೂಪಾಯಿ ದಂಡ ವಿಧಿಸಿದೆ. ಸುಮಾರು ಏಳು ವರ್ಷದ ಹಿಂದೆ ನಡೆದ ಘಟನೆಗೆ ಈಗ ಶಿಕ್ಷೆ ಘೋಷಣೆಯಾಗಿದೆ. ಗೋವಾದ ಪಣಜಿ ನಿವಾಸಿ ಕಿರಣ್ ಸುಜಾ ಎಂಬಾತ ಶಿಕ್ಷೆಗೊಳಾಗಾದ ವ್ಯಕ್ತಿಯಾಗಿದ್ದಾನೆ.
ಮುಂಬೈನ ಸಿಎಸ್‌ಎಂಟಿ ಪೊಲೀಸರ ಪ್ರಕಾರ, ಆಗಸ್ಟ್ 23, 2015ರಂದು ಮಹಿಳಾ ಪ್ರಯಾಣಿಕರೊಬ್ಬರು ತನ್ನ ಸ್ನೇಹಿತರೊಂದಿಗೆ ಗೋವಂಡಿಯಿಂದ ಹಾರ್ಬರ್ ರಸ್ತೆಯಲ್ಲಿರುವ ಸಿಎಸ್‌ಎಂಟಿ ರೈಲು ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದರು. ರೈಲು ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್‌ನ ಪ್ಲಾಟ್‌ಫಾರ್ಮ್ ನಂಬರ್ 1ಕ್ಕೆ ಆಗಮಿಸಿದಾಗ ಕಿರಣ್ ಸುಜಾ ಮಹಿಳೆಯ ಬಲ ಕೆನ್ನೆಗೆ ಮುತ್ತಿಟ್ಟಿದ್ದಾನೆ. ನಂತರ ಸಂತ್ರಸ್ತೆ ಸಿಎಸ್‌ಎಂಟಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಸಂತ್ರಸ್ತೆಯ ದೂರನ್ನು ದಾಖಲಿಸಿಕೊಂಡ ನಂತರ ಪೊಲೀಸರು ಆರೋಪಿ ವಿರುದ್ಧ ಸೆಕ್ಷನ್ 354, 354 (ಎ) (1) ಅಡಿ ಪ್ರಕರಣ ದಾಖಲಿಸಿದ್ದಾರೆ. ಅಂದಿನ ಸಹಾಯಕ ಪೊಲೀಸ್ ನಿರೀಕ್ಷಕ ಗಣಪತ್ ಗೊಂಡ್ಕೆ ಆರೋಪಿಯನ್ನು ಬಂಧಿಸಿ ತನಿಖೆ ಆರಂಭಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಯ ವಿರುದ್ಧ ಪ್ರಬಲ ಸಾಕ್ಷ್ಯಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.