ಪಾಣಿಪತ್ (ಹರಿಯಾಣ): ಹರಿಯಾಣದ ಪಾಣಿಪತ್ ಜಿಲ್ಲೆಯಲ್ಲಿ ದಂಪತಿಯೊಬ್ಬರ ವಿಚ್ಛೇದನ ಪ್ರಕರಣವು ಒಂದು ಕೋಟಿ ರೂಪಾಯಿಗೂ ಅಧಿಕವಾದ ಅತ್ಯಂತ ದುಬಾರಿ ಸೆಟಲ್ಮೆಂಟ್ನಲ್ಲಿ ಅಂತ್ಯವಾಗಿದೆ. ತಮ್ಮ ಆರು ವರ್ಷದ ಮಗಳ ಹೆಸರಿಗೆ 70 ಲಕ್ಷ ರೂ. ಹಾಗೂ ಜೀವನಾಂಶ ವೆಚ್ಚವಾಗಿ ಪತ್ನಿಗೆ 30 ಲಕ್ಷ 11 ಸಾವಿರ ರೂ. ನೀಡಲು ಉದ್ಯಮಿಯೊಬ್ಬರು ಒಪ್ಪಿಕೊಂಡಿದ್ದಾರೆ.
ಪಾಣಿಪತ್ ನಿವಾಸಿಯಾದ ಮಹಿಳೆಯೊಬ್ಬರು ರೋಹ್ಟಕ್ನ ಉದ್ಯಮಿಯನ್ನು ಏಳು ವರ್ಷಗಳ ಹಿಂದೆ ಮದುವೆಯಾಗಿದ್ದರು. ಈ ದಂಪತಿಗೆ ಆರು ವರ್ಷದ ಮಗಳಿದ್ದು, ಕೌಟುಂಬಿಕ ದೌರ್ಜನ್ಯದ ಆರೋಪದ ಮೇಲೆ ಪತಿಗೆ ವಿಚ್ಛೇದನ ನೀಡಲು ಪತ್ನಿ ನಿರ್ಧರಿಸಿದ್ದರು. ಪತಿ ಕೂಡ ಈ ವಿಚ್ಛೇದನಕ್ಕೆ ಒಪ್ಪಿಕೊಂಡಿದ್ದಾರೆ. ಅಲ್ಲದೇ, 1 ಕೋಟಿ 11 ಸಾವಿರ ರೂ. ಹಣ ನೀಡಲು ಸಹ ಸಮ್ಮತಿಸಿದ್ದಾರೆ. ಇದರ ಪ್ರಕಾರ, ತಮ್ಮ ಆರು ವರ್ಷದ ಮಗಳ ಹೆಸರಿಗೆ 70 ಲಕ್ಷ ರೂ. ಹಣ ಜಮೆ ಮಾಡಲು ನಿರ್ಧರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:6 ವರ್ಷಗಳಿಂದ ವಿರಸ.. ವಿಚ್ಛೇದನಕ್ಕೆ ಮುಂದಾಗಿದ್ದ ಒಂದೇ ಕುಟುಂಬದ 2 ಜೋಡಿಗಳ ಬಾಳಲ್ಲಿ ಲೋಕ ಅದಾಲತ್ನಿಂದ ಮೂಡಿತು ಸಮರಸ
ಈ ಕುರಿತು ಮಹಿಳಾ ರಕ್ಷಣೆ ಮತ್ತು ಬಾಲ್ಯ ವಿವಾಹ ನಿಷೇಧ ಅಧಿಕಾರಿ ರಜನಿ ಗುಪ್ತಾ ಮಾತನಾಡಿ, ವಿಚ್ಛೇದನ ಸಂಬಂಧ ಎರಡೂ ಕಡೆಯವರನ್ನು ಕರೆಸಿ ರಾಜಿ ಸಂಧಾನ ಮಾಡಿಸಲು ಪ್ರಯತ್ನಿಸಲಾಗಿತ್ತು. ಆದರೆ, ವಿಚ್ಛೇದನಕ್ಕೆ ಎರಡೂ ಕಡೆಯವರು ಪಟ್ಟು ಹಿಡಿದಿದ್ದರು. ಇದರಿಂದ ವಿಚ್ಛೇದನವಾಗಿದ್ದು, ಮಹಿಳೆಯು ಮಗಳನ್ನು ತಮ್ಮ ಬಳಿಯೇ ಇರಿಸಿಕೊಳ್ಳಲು ಒಪ್ಪಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಈ ಮಹಿಳೆಗೆ ಆರು ವರ್ಷದ ಮಗಳಿದ್ದಾಳೆ. ಎರಡನೇ ಬಾರಿಗೆ ಗರ್ಭಿಣಿಯಾದ ನಂತರ ಗರ್ಭಧಾರಣೆಯ ಪರೀಕ್ಷೆ ಮಾಡಲಾಗಿತ್ತು. ಈ ವೇಳೆ, ಹಣ್ಣು ಮಗು ಇರುವುದು ಪತ್ತೆಯಾದ ಕಾರಣ ಗರ್ಭಪಾತ ಮಾಡಲಾಗಿದೆ ಎಂಬ ಆರೋಪ ಕೂಡ ಇದೆ. ಪತಿಯೇ ಗರ್ಭಪಾತ ಮಾಡಿಸಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ಪತ್ನಿ ದೂರು ನೀಡಿದ್ದರು. ಆದರೆ, ಈ ಆರೋಪಗಳನ್ನು ನಿರಾಕರಿಸಿದ್ದ ಪತಿ, ತವರು ಮನೆಗೆ ಹೋಗಿದ್ದಾಗ ಸ್ವತಃ ತಾನೇ ಗರ್ಭಪಾತ ಮಾಡಿಸಿಕೊಂಡಿದ್ದಾಳೆ ಎಂದು ಹೇಳಿದ್ದರು.
5 ವರ್ಷಗಳಲ್ಲಿ 1399 ವಿಚ್ಛೇದನ ಪ್ರಕರಣ:ಪಾಣಿಪತ್ ಮಹಿಳಾ ರಕ್ಷಣಾ ಇಲಾಖೆಯ ಅಂಕಿ - ಅಂಶಗಳ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಒಟ್ಟು 1399 ವಿಚ್ಛೇದನ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಶೇ.22ರಷ್ಟು ಪ್ರಕರಣಗಳಲ್ಲಿ ವಿಚ್ಛೇದನಕ್ಕೆ ಪತಿ ಮತ್ತು ಹೆಂಡತಿ ಪರಸ್ಪರ ಒಪ್ಪಿಕೊಂಡಿದ್ದಾರೆ. ಉಳಿದ ಶೇ.80ರಷ್ಟು ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರಿವೆ.
ಇದನ್ನೂ ಓದಿ:ಧರ್ಮ, ಕಾನೂನಿನಲ್ಲಿ ಹೆಂಡತಿ - ಮಕ್ಕಳಿಗೆ ಜೀವನಾಂಶ ಪಾವತಿಸುವುದು ಗಂಡನ ಜವಾಬ್ದಾರಿ : ಹೈಕೋರ್ಟ್