ನವದೆಹಲಿ: ಚೀನಾ- ಭಾರತ ಗಡಿ ವಿಚಾರದಲ್ಲಿ ಕೇಂದ್ರ ಸರ್ಕಾರ ಹೇಳುತ್ತಿರುವುದು ಸುಳ್ಳು. ಚೀನಿ ಸೇನೆ ಗಡಿ ಅತಿಕ್ರಮ ನಡೆಸಿಲ್ಲ ಎಂಬುದು ನಂಬಲರ್ಹವಾಗಿಲ್ಲ ಎಂದು ಬಿಜೆಪಿ ಹಿರಿಯ ಧುರೀಣ, ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಮೋದಿ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.
'ಈಟಿವಿ ಭಾರತ' ನಡೆಸಿದ ವಿಶೇಷ ಸಂದರ್ಶನದಲ್ಲಿ, ಚೀನಾ ಮತ್ತು ಭಾರತ ಗಡಿ ವಿಚಾರದಲ್ಲಿ ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಮಾತನಾಡಿದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ವಿಚಾರಲ್ಲಿ ಯಾವುದೇ ಅಧಿಕಾರ ಹೊಂದಿಲ್ಲ. ಚೀನಿಗಳು ನಮ್ಮ ದೇಶದ ಗಡಿ ದಾಟಿ ಅತಿಕ್ರಮಣ ಮಾಡಿಲ್ಲ ಎಂಬುದು ನಂಬಲಾಗಲ್ಲ. ಒಂದು ವೇಳೆ ಇದು ನಿಜವಾದಲ್ಲಿ, ಈ ಬಗ್ಗೆ ನಮ್ಮ ಸೈನಿಕರೇ ನಮಗೆ ಸುಳ್ಳು ಹೇಳುತ್ತಿದ್ದಾರೆ ಎಂದರ್ಥ ಎಂದು ಹೇಳಿದ್ದಾರೆ.
ಸಂಸತ್ ಅಧಿವೇಶನದಲ್ಲೂ ನಾನು ಈ ಬಗ್ಗೆ ಪ್ರಶ್ನಿಸಿದ್ದೆ. ಆದರೆ, ಅದು ರಾಷ್ಟ್ರೀಯ ಭದ್ರತೆಯ ಕಾರಣ ಮಾಹಿತಿ ನೀಡಲಾಗಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿತ್ತು. ಕೇಂದ್ರದ ಈ ನಡೆಯನ್ನು ನಂಬಲಾಗಲ್ಲ. ಅಲ್ಲದೇ, ಸಚಿವ ರಾಜನಾಥ್ ಅವರು ಈ ವಿಚಾರದಲ್ಲಿ ನಿಖರ ಮಾಹಿತಿ ಹೊಂದಿಲ್ಲ ಎಂದು ಆರೋಪಿಸಿದ್ದಾರೆ.
1962 ರ ಭಾರತ-ಚೀನಾ ಯುದ್ಧದ ಇತಿಹಾಸ ಮತ್ತೆ ಮರುಕಳಿಸಬಹುದು ಎಂಬ ಭಯದಿಂದ ಕೇಂದ್ರ ಸರ್ಕಾರ ಗಡಿ ವಿವಾದದಲ್ಲಿ ಹೆಚ್ಚಿನ ಧೈರ್ಯ ತೋರಿಸುತ್ತಿಲ್ಲ. ಅಲ್ಲದೇ ಈ ವಿಚಾರದಲ್ಲಿ ಮಾಧ್ಯಮಗಳು ಕೂಡ ಕರಾರುಕ್ಕಾಗಿ ಮಾಹಿತಿ ನೀಡುತ್ತಿಲ್ಲ. ಚೀನಾ ನಮ್ಮ ಭೂಪ್ರದೇಶವನ್ನು ಸ್ವಲ್ಪ ಸ್ವಲ್ಪವೇ ನುಂಗುತ್ತಿದೆ. ಇದು ಇಲಿಯ ಮಾದರಿಯ ದಾಳಿಯಾಗಿದೆ. ಉಭಯ ದೇಶಗಳ ಮಧ್ಯೆ ನಡೆಯುವ 14 ನೇ ಸುತ್ತಿನ ಮಾತುಕತೆಯೂ ಫಲಪ್ರದವಾಗುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.
ಧೈರ್ಯ ಕಳೆದುಕೊಂಡರಾ ಪ್ರಧಾನಿ ಮೋದಿ..
ಚೀನಾ ವಿಚಾರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಧೈರ್ಯ ಕಳೆದುಕೊಂಡಿದ್ದಾರೆ. ಮೋದಿಯಂತಹ ನಾಯಕನ ಅವಧಿಯಲ್ಲಿ ಚೀನಾ ಭಾರತದ ಗಡಿ ಅತಿಕ್ರಿಮಿಸಿದರೆ ಇದು ಇಡೀ ವಿಶ್ವಕ್ಕೇ ಭಾರತದ ಬಗ್ಗೆ ಎಂತಹ ಸಂದೇಶ ಹೋಗಬಹುದು ಎಂಬುದನ್ನು ಯೋಚಿಸಿ ಎಂದು ಪ್ರಶ್ನೆಯೊಂದನ್ನು ತೇಲಿಬಿಟ್ಟಿದ್ದಾರೆ.