ನವದೆಹಲಿ: ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ನಾಳೆ ಹೊರಬೀಳಲಿದೆ. ಈ ಬೆನ್ನಲ್ಲೇ ಉದ್ಯಮಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪತಿ, ರಾಬರ್ಟ್ ವಾದ್ರಾ ಅವರು ಕಾಂಗ್ರೆಸ್ ಮೂಲಕ ರಾಜಕೀಯಕ್ಕೆ ಪ್ರವೇಶಿಸುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
'ಈಟಿವಿ ಭಾರತ'ದ ಜೊತೆ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ನಾನು ರಾಜಕೀಯಕ್ಕೆ ಪ್ರವೇಶಿಸುವಂತೆ ಅನೇಕ ಮನವಿಗಳು ಬಂದಿವೆ. ಈ ಕುರಿತು ಕುಟುಂಬದೊಂದಿಗೆ ಚರ್ಚಿಸಿ ನಂತರ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇನೆ. ಬಿಜೆಪಿ ಸೇರಿದಂತೆ ನನ್ನ ವಿರುದ್ಧ ಆರೋಪಗಳನ್ನು ಮಾಡುತ್ತಿರುವ ಪಕ್ಷಗಳ ವಿರುದ್ಧ ಹೋರಾಡಲು ಇದು ಏಕೈಕ ಮಾರ್ಗ ಎಂದು ಅವರು ಅಭಿಪ್ರಾಯ ವ್ಯಕ್ತಡಿಸಿದರು.
'ಈಟಿವಿ ಭಾರತ'ದ ಜೊತೆ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ರಾಬರ್ಟ್ ವಾದ್ರಾ ಮೊರಾದಾಬಾದ್ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತೀರಾ? ಎಂಬ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದನ್ನ ಇನ್ನೂ ನಿರ್ಧರಿಸಿಲ್ಲ. ಆದರೆ ಮೊರಾದಾಬಾದ್ಗೂ ನಮ್ಮ ಕುಟುಂಬಕ್ಕೂ ಸಂಬಂಧವಿದೆ. ನನ್ನ ಪೂರ್ವಜರು ಅಲ್ಲಿ ವಾಸಿಸುತ್ತಿದ್ದರು. ಚುನಾವಣೆಯಿರಲಿ ಬಿಡಲಿ, ನಾನು ದೇವಸ್ಥಾನ, ಮಸೀದಿ, ಚರ್ಚಿಗೆ ಹೋಗುತ್ತೇನೆ.
ಮೊರಾದಾಬಾದ್ ಅಥವಾ ಉತ್ತರ ಪ್ರದೇಶದ ಯಾವುದೇ ಕ್ಷೇತ್ರವನ್ನು ಆಯ್ಕೆ ಮಾಡಿ ರಾಜಕೀಯಕ್ಕೆ ಇಳಿಯುವಂತೆ ನನಗೆ ಸಾಕಷ್ಟು ಒತ್ತಾಯವನ್ನು ಕಾರ್ಯಕರ್ತರು ಮಾಡುತ್ತಿದ್ದಾರೆ. ನನ್ನ ಮೇಲೆ ಮತದಾರನಿಗೆ ಬಹಳಷ್ಟು ವಿಶ್ವಾಸ ಇರುವುದರಿಂದ, ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಒತ್ತಡವಿದೆ. ಸ್ಪರ್ಧಿಸುತ್ತೇನೋ, ಇಲ್ಲವೋ ಜನಸೇವೆಯಲ್ಲಂತೂ ಇರುತ್ತೇನೆ ಎಂದು ಹೇಳುವ ಮೂಲಕ ರಾಬರ್ಟ್ ವಾದ್ರಾ ಚುನಾವಣೆಗೆ ಸ್ಪರ್ಧಿಸುವ ಮುನ್ಸೂಚನೆಯನ್ನು ನೀಡಿದ್ದಾರೆ.
ಇದನ್ನೂ ಓದಿ:ಗ್ವಾಟೆಮಾಲಾದಲ್ಲಿ ಜ್ವಾಲಾಮುಖಿ ಸ್ಫೋಟದ ಎಫೆಕ್ಟ್: 500 ನಿವಾಸಿಗಳ ಸ್ಥಳಾಂತರ!